ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಣೆ ಮಾತ್ರವಲ್ಲ, ಮಂಪರು ಪರೀಕ್ಷೆಗೂ ಸಿದ್ದ: ಎಚ್‌ಡಿಕೆ (narco test | Kumaraswamy | Yeddyurappa | Lord Manjunatha | Dharmasthala)
PTI
ಭ್ರಷ್ಟಾಚಾರದ ದಾಖಲೆಗಳನ್ನು ಬಹಿರಂಗಪಡಿಸದಂತೆ ಆಪ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಧಾನಕ್ಕೆ ಆಹ್ವಾನಿಸಿದ ಬಗ್ಗೆ ಧರ್ಮಸ್ಥಳ ಮಂಜುನಾಥನ ಎದುರಿನಲ್ಲಿ ಪ್ರಮಾಣ ಮಾಡುವುದು ಮಾತ್ರವಲ್ಲ, ಮಂಪರು ಪರೀಕ್ಷೆ ಸೇರಿದಂತೆ ಯಾವುದೇ ವಿಧಿ ವಿಜ್ಞಾನ ಪರೀಕ್ಷೆಗೂ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಈ ಕುರಿತು ಸವಾಲು ಹಾಕಿದರಲ್ಲದೆ, ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡಲು ತಾವು ಸಮ್ಮತಿಸಿದ್ದನ್ನು ಸಮರ್ಥಿಸಿಕೊಂಡರು. ಆರೋಪ ಮಾಡಿ ಓಡಿ ಹೋಗುವುದು ನನ್ನ ಜಾಯಮಾನವಲ್ಲ. ಹೀಗಾಗಿ ನನ್ನ ಸುತ್ತ ಸಂಶಯದ ಹುತ್ತ ಬೆಳೆಯಬಾರದು ಎಂಬ ಕಾರಣಕ್ಕಾಗಿಯೇ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಭ್ರಷ್ಟಾಚಾರದ ಹಗರಣಗಳನ್ನು ಬಹಿರಂಗಪಡಿಸದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನನ್ನೊಂದಿಗೆ ರಾಜಿ ಸಂಧಾನಕ್ಕೆ ಯತ್ನಿಸಿದ್ದನ್ನು ಬಹಿರಂಗಪಡಿಸಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೇ ನನ್ನ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಒಪ್ಪಿಕೊಳ್ಳದೇ ಇದ್ದರೆ ಜನ ನನ್ನ ಸಂಶಯದಿಂದ ನೋಡುತ್ತಿದ್ದರು. ಅಲ್ಲದೆ ಪಲಾಯನವಾದಿ ಎಂದು ಹಣೆ ಪಟ್ಟಿಕಟ್ಟುತ್ತಿದ್ದರು.

ಮುಖ್ಯಮಂತ್ರಿಗಳು ಸಂಧಾನಕ್ಕೆ ಕರೆದಿದ್ದರು ಎಂಬುದು ನಾನು ವೈಯಕ್ತಿಕವಾಗಿ ಮಾಡಿದ ಆರೋಪ. ಆದ್ದರಿಂದ ಧರ್ಮಸ್ಥಳಕ್ಕೆ ನಾನೊಬ್ಬನೇ ಹೋಗಿ ಪ್ರಮಾಣ ಮಾಡುತ್ತೇನೆ. ಕುಟುಂಬ ಸದಸ್ಯರಾರೂ ಬರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ತಾನು ಜೂನ್ 26ರಂದೇ ಕುಟುಂಬ ಸಮೇತ ಧರ್ಮಸ್ಥಳದಲ್ಲಿ ಹಾಜರಾಗಿ ಆಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಬರುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ನಾನಂತೂ ಜಾಹೀರಾತಿನಲ್ಲಿ ನೀಡಿರುವ ಹೇಳಿಕೆಗೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಇವನ್ನೂ ಓದಿ