"ಕರ್ನಾಟದ ದೇಶದಲ್ಲೇ ನಂಬರ್ ವನ್ ಭ್ರಷ್ಟ ರಾಜ್ಯ. ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು ದೇಶದ ಇನ್ಯಾವುದೇ ರಾಜ್ಯದಲ್ಲಿ ನಡೆಯುವುದಿಲ್ಲ"- ಹೌದು ಹೀಗೆಂದು ಅಭಿಪ್ರಾಯಪಟ್ಟವರು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್.
ಇದುವರೆಗೆ ಕರ್ನಾಟಕ ಸರಕಾರ ಭಷ್ಟಚಾರದಲ್ಲಿ ತೊಡಗಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಆದರೆ ಇದೀಗ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯವಾದಿ ಇಂತಹದೊಂದು ಅಭಿಪ್ರಾಯ ಮಂಡಿಸಿರುವುದು ರಾಜ್ಯ ಸರಕಾರಕ್ಕೆ ತೀವ್ರ ಹಿನ್ನಡೆಗೆ ಕಾರಣವಾಗಿದ್ದು, ಸಂಕಷ್ಟಕ್ಕೆ ಸಿಲುಕಿಸಿದೆ.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ರಾಜ್ಯ; ಎಲ್ಲ ಇಲಾಖೆಗಳಲ್ಲಿಯೂ ಅವ್ಯವಹಾರ ನಡೆಯುತ್ತಿದೆ ಎಂಬುದು ಸರಕಾರ ಕಾರ್ಯಗಳನ್ನು ನೋಡಿದರೆ ಗಮನಕ್ಕೆ ಬರುತ್ತಿದೆ ಎಂದು ನ್ಯಾಯವಾದಿ ಖೇಹರ್ ಆರೋಪಿಸಿದ್ದಾರೆ.
ನ್ಯಾಯವಾದಿ ಖೇಹರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕರು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಡ್ಡಿ ಸರಕಾರವು ಭ್ರಷ್ಟಚಾರದಲ್ಲಿ ತೊಡಗಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಮಿಗಿಲಾದ ಮತ್ತೊಂದು ನಿದರ್ಶನ ಬೇಕಾಗಿಲ್ಲ. ಹೈಕೋರ್ಟ್ ನ್ಯಾಯಮೂರ್ತಿ ಖೇಹರ್ ಹೇಳಿಕೆಯಿಂದಲೇ ಇದಕ್ಕೆ ಪುಷ್ಠಿ ದೊರಕುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ.