ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಡವಳಿಕೆ ನೋಡಿದರೆ ದೇವರ ಮೇಲೆ ನಂಬಿಕೆ ಇರುವ ಬಗ್ಗೆಯೇ ಅನುಮಾನ ಮೂಡುತ್ತದೆ ಎಂದಿರುವ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ, ಇವರೇನಾದ್ರೂ ಧರ್ಮಸ್ಥಳಕ್ಕೆ ಹೋದ್ರೆ ಮಂಜುನಾಥನೇ ಓಡಿಹೋಗುತ್ತಾನೇನೋ ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಆಣೆ-ಪ್ರಮಾಣ ರಾಜಕೀಯವನ್ನು ಕಟುವಾಗಿ ಟೀಕಿಸಿದರು.
ಈ ದೇಶದಲ್ಲಿ ಸಂವಿಧಾನ, ಕಾನೂನು ಎಲ್ಲವೂ ಇದೆ. ದೇವರು ಅವರವರ ವೈಯಕ್ತಿಕ ನಂಬಿಕೆಯಾಗಿದೆ. ಆದರೆ ಮುಖ್ಯಮಂತ್ರಿಗಳು ರಾಜಕೀಯಕ್ಕೂ ಆಣೆಯನ್ನು ಎಳೆದುತಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇಬ್ಬರ ನಡವಳಿಕೆಯೂ ಪ್ರಜಾಪ್ರಭುತ್ವ ವಿರೋಧಿಯಾದದ್ದು ಎಂದು ಹೇಳಿದರು.
ಆರೋಪ-ಪ್ರತ್ಯಾರೋಪ ಸಹಜ, ಆದರೆ ಮುಖ್ಯಮಂತ್ರಿಗಳು ಆತುರದಿಂದ ಹೇಳಿಕೆ ನೀಡಿ ನಂತರ ಅದರಿಂದ ಪಲಾಯನವಾದ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಟೀಕಿಸಿದರು.