ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಪ್ಪು ಮಾಡಿ ಕೈಮುಗಿದ್ರೆ ಪಾಪ ಪರಿಹಾರವಾಗುತ್ತಾ?: ಮೋಟಮ್ಮ (Motamma | BJP | Kumaraswamy | Yeddyurappa | Dharmasthala | Congress)
ತಪ್ಪು ಮಾಡಿ ಕೈಮುಗಿದ್ರೆ ಪಾಪ ಪರಿಹಾರವಾಗುತ್ತಾ?: ಮೋಟಮ್ಮ
ಬೆಂಗಳೂರು, ಮಂಗಳವಾರ, 28 ಜೂನ್ 2011( 13:31 IST )
ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮ ಹೀಗೆ ಮಾಡಬಾರದ್ದನ್ನೆಲ್ಲ ಮಾಡಿ ತಮ್ಮ ಪಟಾಲಂ ಜೊತೆ ಧರ್ಮಸ್ಥಳಕ್ಕೆ ಹೋಗಿ ಕೈಮುಗಿದರೆ ಪಾಪ ಪರಿಹಾರವಾಗುತ್ತದೆಯೇ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕಿ ಮೋಟಮ್ಮ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಶಾಸಕರ ದಂಡಿನೊಂದಿಗೆ ಮೆರವಣಿಗೆ ಮಾಡಿಕೊಂಡು ಧರ್ಮಸ್ಥಳಕ್ಕೆ ಹೋಗುವ ಅವಶ್ಯಕತೆ ಹಾಗೂ ಅನಿವಾರ್ಯತೆ ಏನಿತ್ತು. ಧರ್ಮಸ್ಥಳಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಪೂಜೆ ಮಾಡುವ ಕಾರ್ಯಕ್ರಮವನ್ನೇ ಒಂದು ದೊಡ್ಡ ಪ್ರಚಾರ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು,ಸರಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡು ತಮ್ಮ ಶಾಸಕರನ್ನು ಕರೆದುಕೊಂಡು ಪ್ರತಿಷ್ಠೆಗೆ ಬಿದ್ದವರಂತೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ಕ್ಷೇತ್ರವನ್ನೂ ಅಪವಿತ್ರ ಮಾಡಿದ್ದಾರೆಂದು ಅವರು ಕುಟುಕಿದರು.
ಇವರ ಭೇಟಿಯಿಂದ ನೈಜ ಭಕ್ತರಿಗೆ ತೊಂದರೆಯಾಗಿದೆ. ಈ ಭಕ್ತರ ಪರವಾಗಿ ಸಿಎಂ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಠಕ್ಕೆ ಬಿದ್ದವರಂತೆ ನಡೆಸುತ್ತಿರುವ ಈ ಬೆಳವಣಿಗೆ ಖಂಡನೀಯ ಎಂದು ಹೇಳಿದರು.
ಜನಪರವಾಗಿ ಕೆಲಸ ಮಾಡಿ ರಾಜ್ಯದ ಪ್ರಗತಿ ಮಾಡಿ ಎಂದು ಜನ ಚುನಾವಣೆಯ ಮೂಲಕ ಆದೇಶ ನೀಡಿದ್ದಾರೆ. ಆದರೆ, ಇವರು ಗುಡಿ, ಮಠಗಳನ್ನು ಸುತ್ತುತ್ತಾ ಆಣೆ, ಹೋಮ-ಹವನಗಳಲ್ಲೇ ಕಾಲ ಹರಣ ಮಾಡುತ್ತಿದ್ದು, ಜನ ಇವರನ್ನು ಕ್ಷಮಿಸುವುದಿಲ್ಲ ಎಂದರು.