ಮುಖ್ಯಮಂತ್ರಿ ಬೆಂಗಳೂರಿನಲ್ಲಿಲ್ಲ, ಧರ್ಮಸ್ಥಳ-ಸುಬ್ರಹ್ಮಣ್ಯಕ್ಕೆ ಹೋಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದ್ದರೂ, ಮುಖ್ಯಮಂತ್ರಿ ಬರುವವರೆಗೂ ಉಪವಾಸ ಸತ್ಯಾಗ್ರಹ ಮಾಡಿಯೇ ತೀರುತ್ತೇನೆ ಎಂದು ಮಾಜಿ ಪ್ರಧಾನಿ, ಮಣ್ಣಿನ ಮಗ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಹಠ ಹಿಡಿದಿದ್ದಾದರೂ ಯಾಕೆ? ಇದಕ್ಕೆ ಪ್ರಮುಖ ಕಾರಣ ಸೋಮವಾರ ಏಕಾದಶಿ!
ಆಣೆ ಪ್ರಮಾಣ ಪ್ರಹಸನದ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೂನ್ 27ರಂದು ಧರ್ಮಸ್ಥಳಕ್ಕೆ ತೆರಳುತ್ತಾರೆ ಎಂದು ಘಂಟಾಘೋಷವಾಗಿ ಸಾರಿದ್ದುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೂ ಸೋಮವಾರ ಮುಖ್ಯಮಂತ್ರಿಯ ಬೆಂಗಳೂರು ನಿವಾಸದೆದುರು ಗೌಡರು ತಮ್ಮ ಬೆಂಬಲಿಗ ಪರಿವಾರದೊಂದಿಗೆ ತೆರಳಿ, ತಮ್ಮ ಹಾಸನ ಜಿಲ್ಲೆಗೆ ಸರಕಾರದಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಉಪವಾಸಕ್ಕೆ ಕೂತೇ ಬಿಟ್ಟರು. ಆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಿರುವುದನ್ನು ಹೇಳಿದಾಗ, ಕೇವಲ ನಾಲ್ಕು ಮಂದಿಯೊಂದಿಗೆ ತೆರಳಿ ಉಪವಾಸ ಕೂರುತ್ತೇನೆ ಎಂದರು ಗೌಡರು.
ಮುಖ್ಯಮಂತ್ರಿ ನಗರದಲ್ಲಿ ಇಲ್ಲ. ಹೀಗಾಗಿ ಈ ದಿನ ಪರಿಹಾರ ದೊರೆಯುವುದೂ ಇಲ್ಲ ಎಂಬುದು ಖಚಿತವಾಗಿ ಎಲ್ಲರಿಗೆ ತಿಳಿದಿತ್ತು. ಆದರೂ ಗೌಡರು ಆನಂದರಾವ್ ವೃತ್ತದ ಬಳಿಯ ಗಾಂಧಿ ಪ್ರತಿಮೆಗೆ ಹಾರ ಹಾಕಿ ಸತ್ಯಾಗ್ರಹಕ್ಕೆ ಹೊರಟಿದ್ದರು. ಆದರೆ ಅದು ಏಕಾದಶಿ ದಿನ. ದೈವಭಕ್ತರಾಗಿರುವ ಗೌಡರು ಪ್ರತಿ ಏಕಾದಶಿಯಂದು ಉಪವಾಸ ಕೂರುವುದು ಸಂಪ್ರದಾಯ. ಈ ಸೋಮವಾರದ ಸರ್ವೈಷಾಂ ಏಕಾದಶಿಯ ವಿಶೇಷವೆಂದರೆ, ಮನೆಯಲ್ಲಿ ಕೂರುವ ಬದಲಾಗಿ, ರೇಸ್ ಕೋರ್ಸ್ ರಸ್ತೆಯ ಮರಗಳಡಿ ಉಳಿದ ಅರ್ಧ ದಿನವನ್ನು "ಉಪವಾಸ" ಸತ್ಯಾಗ್ರಹ ಮೂಲಕ ಕಳೆದರು.
10.30ಕ್ಕೆ ಗೌಡರು ಬಂದಾಗಲೇ, ಅಣ್ಣಾ ಹಜಾರೆ ಅವರು ಜಂತರ್ ಮಂತರ್‌ನಲ್ಲಿ ಉಪವಾಸ ಮಾಡಿದಾಗ ಇದ್ದಂತಹಾ ಪರಿಸ್ಥಿತಿ ಏರ್ಪಡುತ್ತದೆ, ಟಿವಿ ಮಾಧ್ಯಮಗಳೆಲ್ಲವೂ ತಮ್ಮತ್ತ ಕ್ಯಾಮರಾ ಹಿಡಿಯುತ್ತವೆ ಎಂದು ಜೆಡಿಎಸ್ ಬೆಂಬಲಿಗರನೇಕರು ನಿರೀಕ್ಷೆಯಲ್ಲಿದ್ದರು. ಯಾಕೆಂದರೆ ಉಪವಾಸ ಮಾಡುತ್ತಿರುವವರು ಈ ದೇಶದ ಒಬ್ಬ ಮಾಜಿ ಪ್ರಧಾನ ಮಂತ್ರಿ. ಪೊಲೀಸರು ಸ್ಥಳಕ್ಕೆ ಬಂದಾಗ, ಬಾಬಾ ರಾಮದೇವ್ ಅವರಿಗೆ ದೆಹಲಿಯ ಜಂತರ್ ಮಂತರ್ ಎದುರಾದ ಪರಿಸ್ಥಿತಿ ಜ್ಞಾಪಕಕ್ಕೆ ಬಂದಿತು. ಅಂಥದ್ದೇನೂ ಆಗಲಿಲ್ಲ. ಪೊಲೀಸರು ನಿಷೇಧಾಜ್ಞೆಯಿರುವುದನ್ನು ಗೌಡರಿಗೆ ತಿಳಿಹೇಳಲು ಬಂದಿದ್ದರು.
ನಿಷೇಧಾಜ್ಞೆಯಿಂದಾಗಿ ಗೌಡರು ಫುಟ್‌ಪಾತ್‌ನಲ್ಲೇ ಕೂತು, ಮುಖ್ಯಮಂತ್ರಿ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ. ಎರಡು ದಿನ ಬಿಟ್ಟು ಬೇಕಾದರೂ ಬರಲಿ, ಅದುವರೆಗೆ ಇಲ್ಲೇ ಇರುತ್ತೇನೆ ಎಂದರು. ಕೊನೆಗೆ, ಮಧ್ಯಾಹ್ನ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮತ್ತು ಜಂಟಿ ಕಾರ್ಯದರ್ಶಿ ದಯಾಶಂಕರ್ ಅವರು ಗೌಡರ ಮನವೊಲಿಕೆಗೆ ಯತ್ನಿಸಿದರು. ಪುನಃ ಎರಡನೇ ಬಾರಿ, ಮುಖ್ಯಮಂತ್ರಿಯಿಂದ ಸಂದೇಶ ಬಂದಿದೆ, ಉಪವಾಸ ಕೈಬಿಡಲು ಮನವಿ ಮಾಡಿದ್ದಾರೆ ಎಂದು ಪತ್ರವೊಂದನ್ನು ಗೌಡರ ಕೈಗಿಡಲಾಯಿತು. ಜುಲೈ 3ರೊಳಗೆ ಸಭೆ ಕರೆಯಿರಿ ಎಂದು ಗಡುವು ನೀಡುತ್ತಾ ದೇವೇಗೌಡರು ಉಪವಾಸ ಮುಗಿಸಿ ಅಲ್ಲಿಂದ ತೆರಳಿದರು.