ನಮ್ಮ ಕುಟುಂಬದ ಅಕ್ರಮ ಆಸ್ತಿ ಬಗ್ಗೆ ಸರಕಾರ 3 ತಿಂಗಳೊಳಗೆ ತನಿಖೆ ನಡೆಸಬೇಕು ವಾರದೊಳಗಾಗಿ ತನಿಖೆಯ ಸ್ವರೂಪವನ್ನು ಪ್ರಕಟಿಸದಿದ್ದಲ್ಲಿ ವಿಧಾನಸೌಧದೆದುರು ಉಪವಾಸ ಸತ್ಯಾಗ್ರಹ ಮಾಡಿಯೇ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ದೇವೇಗೌಡರ ಕುಟುಂಬ 1,500 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದೆ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದಾರೆ. ಈ ಕುರಿತು ಸರಕಾರ ಯಾವುದೇ ತನಿಖೆ ನಡೆಸಲಿ ಎದುರಿಸಲು ಸಿದ್ಧ ಒಟ್ಟಿನಲ್ಲಿ ಜನತೆಗೆ ಸತ್ಯಾಂಶ ಗೊತ್ತಾಗಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೆಐಎಡಿಬಿ ಸಂಸ್ಥೆಯ ಭ್ರಷ್ಟಾಚಾರ ಹೆಚ್ಚಳವಾಗಿದೆ. ಭ್ರಷ್ಟಾಚಾರ ಕುರಿತಂತೆ ಉನ್ನತಮಟ್ಟದ ತನಿಖೆ ನಡೆದಲ್ಲಿ, ಭ್ರಷ್ಟರನ್ನು ಜೈಲಿನಲ್ಲಿರಲಿಸಲು ತಿಹಾರ್ ಜೈಲಿನಂತಹ ನಾಲ್ಕು ಹೊಸ ಜೈಲುಗಳ ಅವಶ್ಯಕತೆಯಿದೆ. ಹೊಸ ಜೈಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಕೈದಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಉಪವಾಸ ಸತ್ಯಾಗ್ರಹ ಆರಂಭಿಸಲು ಧರ್ಮಸ್ಥಳದ ಮಂಜುನಾಥ ದೇವರು ನನಗೆ ಪ್ರೇರಣೆಯಾಗಿದ್ದಾರೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಬಿಜೆಪಿ ಎಲ್ಲಾ ಸಂದರ್ಭಗಳಲ್ಲಿ ಪಲಾಯನವಾದ ಅನುಸರಿಸುತ್ತಿದೆ ಎಂದು ವ್ಯಂಗವಾಡಿದರು.
ಮಠಾಧೀಶರು ಬಹಿರಂಗವಾಗಿ ಸಲಹೆ ನೀಡುವುದು ಸರಿಯಲ್ಲ. ಅವರು ರಾಜ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಮಾರ್ಗದರ್ಶಕರಾಗಬೇಕು ಎಂದು ಕುಮಾರಸ್ವಾಮಿ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.