ರಾಜ್ಯದಲ್ಲಿ ಅದಿರು ರಫ್ತು ನಿಷೇಧವಿದ್ದರೂ ನಿರಂತರವಾಗಿ ಅದಿರು ಸಾಗಾಣೆಯಾಗುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರ್ಯವೈಖರಿ ಸಂದೇಹಾಸ್ಪದವಾಗಿದೆ. ಪರೋಕ್ಷವಾಗಿ ಸರಕಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ದಿವಾಕರ್ ಬಾಬು ಆರೋಪಿಸಿದ್ದಾರೆ.
ಇತ್ತೀಚೆಗೆ ಗಣಿ ಉದ್ಯಮಿಗಳಿಂದ ಸರ್ವೆ ಆಫ್ ಇಂಡಿಯಾದ ಗಣಿ ಸರ್ವೆ ಅಧಿಕಾರಿಗಳು ಹಾಗೂ ಐಬಿಎಂ ಅದಿಕಾರಿಗಳ ಅಪಹರಣವಾಗಿತ್ತು. ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯಕ್ತ ವರದಿಯನ್ನು 15 ದಿನದೊಳಗಾಗಿ ಸಲ್ಲಿಸದಿದ್ದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ಕಳೆದ ಜೂನ್ ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ವರದಿಯನ್ನು ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದ ಲೋಕಾಯುಕ್ತರು, ಇದೀಗ, ಅನಗತ್ಯ ವಿಳಂಬ ನೀತಿಯನ್ನು ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಿಂದ ನೆರೆಯ ರಾಜ್ಯವಾದ ಆಂಧ್ರಪ್ರದೇಶದ ಮೂಲಕ ಚೀನಾ ದೇಶಕ್ಕೆ ಕಬ್ಬಿಣದ ಅದಿರು ರಫ್ತು ಕಾರ್ಯ ನಿರಂತರವಾಗಿ ಸಾಗಿದೆ. ಸರಕಾರವಾಗಲಿ, ಲೋಕಾಯುಕ್ತರಾಗಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.