ನಿವೃತ್ತಿಯಾಗುವುದರೊಳಗಾಗಿ ಅಕ್ರಮ ಗಣಿಗಾರಿಕೆ ಅಂತಿಮ ವರದಿಯನ್ನು ನೀಡಿಯೇ ಹೋಗುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಈ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮಾಡಿರುವ ಟೀಕೆಗೆ ತಿರುಗೇಟು ನೀಡಿದ್ದಾರೆ. ಯಾರೋ ಹೇಳಿದರೋ ಅಥವಾ ಇನ್ನಾರೋ ಟೀಕಿಸಿದರೋ ಎಂಬ ಕಾರಣಕ್ಕೆ ನಾನು ವರದಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ವ್ಯಾಪಕವಾಗಿ ತನಿಖೆ ನಡೆದ ಮೇಲಷ್ಟೆ ವರದಿ ನೀಡಲು ಸಾಧ್ಯ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು.ಇದಕ್ಕೆ ನಾನು ಕಾಲಮಿತಿಯನ್ನು ಹಾಕಿಕೊಂಡಿಲ್ಲ. ಆದರೆ, ನಿವೃತ್ತಿಯಾಗುವದರೊಳಗೆ ಅಂತಿಮ ವರದಿ ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ನನ್ನನ್ನು ವಿರೋಧ ಸ್ಥಾನದಲ್ಲಿಟ್ಟಿವೆ. ವಿಶೇಷವಾಗಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್, ವೀರಪ್ಪ ಮೊಯ್ಲಿ, ಬಿಜೆಪಿ ಅಧ್ಯಕ್ಷ ಗಡ್ಕರಿ ನನ್ನನ್ನು ವಿರೋಧ ಪಕ್ಷದ ನಾಯಕನೆಂದು ಕರೆದರು.ಈಗ ಕಾಂಗ್ರೆಸ್ ಆ ಸ್ಥಾನವನ್ನು ತುಂಬುತ್ತಿದೆ ಎಂದು ಹೆಗ್ಡೆ ವ್ಯಂಗವಾಡಿದ್ದಾರೆ.