ಮುಂಗಾರು ಮಳೆಯ ಅಭಾವದಿಂದಾಗಿ ತತ್ತರಿಸಿ ಬರದ ಭೀತಿಯಲ್ಲಿರುವ ರಾಜ್ಯದ ರೈತರು ಆತಂಕಗೊಂಡಿರುವ ಸಂದರ್ಭದಲ್ಲಿಯೇ, ಅಧ್ಯಯನದ(ಮೋಜಿನ) ಹೆಸರಲ್ಲಿ ಸರಕಾರಿ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರು ಸಿದ್ಧತೆ ನಡೆಸುತ್ತಿದ್ದಾರೆ.
ವಿಧಾನಸಭೆಗೆ ಆಯ್ಕೆಯಾದ ಶಾಸಕರಿಗೆ ಸಚಿವಾಲಯದಿಂದ ಒಂದು ಬಾರಿಗೆ ವಿದೇಶ ಪ್ರವಾಸದ ಭಾಗ್ಯ ಕಲ್ಪಿಸಲಾಗುತ್ತದೆ. ಅದರಂತೆ ಈ ವಿಧಾನಸಭೆಯ 140ಕ್ಕೂ ಹೆಚ್ಚಿನ ಶಾಸಕರು ಕಳೆದ ಮೂರು ವರ್ಷಗಳಲ್ಲಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಆದರೆ, 85 ಮಂದಿ ಶಾಸಕರಿಗೆ ವಿದೇಶಕ್ಕೆ ಹಾರುವ ಯೋಗ ಕೂಡಿ ಬಂದಿರಲಿಲ್ಲ.
ಕಳೆದ ಒಂದು ವರ್ಷದಿಂದ ವಿದೇಶ ಪ್ರವಾಸಕ್ಕೆ ತೆರಳಲು ಹಲವು ಬಾರಿ ಪ್ರಯತ್ನಿಸಿದರಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಐದು ತಂಡಗಳನ್ನು ರಚಿಸಲಾಗಿದ್ದು, ಅವುಗಳಿಗೆ ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ಎಚ್.ಸಿ ಬಾಲಕೃಷ್ಣ, ದಿನೇಶ್ ಗುಂಡೂರಾವ್, ಎಸ್.ರಘು ಮತ್ತು ಅಭಯ ಪಾಟೀಲ್ ಮುಂದಾಳತ್ವ ವಹಿಸಲಿದ್ದಾರೆ.
ಅಧ್ಯಯನಕ್ಕೋ......ಮೋಜಿಗೋ?
ಕಳೆದ ಮೂರು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಶಾಸಕರು ವಿದೇಶಗಳಿಗೆ ಹೋಗಿ. ಅಲ್ಲಿನ ಶಾಸನಸಭೆಯ ನಡಾವಳಿಗಳು, ಕಾರ್ಯಕಲಾಪಗಳು, ಜನಪ್ರತಿನಿಧಿಗಳ ವರ್ತನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅದ್ಯಯನ ಮಾಡಿರುವುದಾಗಿ ಹೇಳುತ್ತಾರೆ. ಆದರೆ, ವಿಧಾನಸಭೆಯಲ್ಲಿ ನೋಡಿದಲ್ಲಿ ಶಾಸಕರದ್ದು ಅದೇ ರಾಗ ಅದೇ ತಾಳ ಎನ್ನುವುದು ಜನಸಾಮಾನ್ಯರ ಆರೋಪವಾಗಿದೆ.
ಮೇಲ್ಮನೆ ಸದಸ್ಯರಿಂದಲೂ ಲಂಡನ್ ಪ್ರವಾಸ
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಮಂದಿ ಶಾಸಕರು 13 ದಿನಗಳ ಪ್ರವಾಸಕ್ಕಾಗಿ ಲಂಡನ್‌ಗೆ ತೆರಳುತ್ತಿದ್ದಾರೆ. ಅಲ್ಲಿನ ಹೌಸ್ ಈಫ್ ಕಾಮನ್ಸ್ ಮತ್ತು ಹೌಸ್ ಆಫ್ ಲಾರ್ಡ್ಸ್‌ನಲ್ಲಿ ನಡೆಯುವ ಕಲಾಪಗಳನ್ನು ವೀಕ್ಷಿಸಲಿದ್ದಾರೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.