'ನಂಬಿಕೆ ಇಲ್ಲದಿದ್ರೆ ಬದುಕಿದ್ದೂ ಸತ್ತಂತೆ' ಎಚ್‌ಡಿಕೆ ನಿರಶನ ಆರಂಭ
ಬೆಂಗಳೂರು, ಶನಿವಾರ, 9 ಜುಲೈ 2011( 09:45 IST )
ತಮ್ಮ ಕುಟುಂಬದ ವಿರುದ್ಧ ಆರೋಪ ಮಾಡಿರುವ 1,500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂಬ ಬಲವಾದ ಬೇಡಿಕೆಯೊಂದಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಆಮರಣಾಂತ ನಿರಶನ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಜನರ ನಂಬಿಕೆ ಇಲ್ಲದಿದ್ರೆ ಬದುಕಿದ್ದೂ ಸತ್ತಂತೆ' ಎಂದು ತಿಳಿಸಿದ್ದಾರೆ. ತಮ್ಮ ಕುಟುಂಬದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ರಾಜ್ಯ ಬಿಜೆಪಿ ಸರಕಾರವು ಮಾಡುತ್ತಿದೆ. ಆದರೆ ಘನತೆ ಗೌರವ ಇದ್ದಲ್ಲಿ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಫ್ರೀಡಂ ಪಾರ್ಕ್‌ನಲ್ಲಿ ಕುಮಾರಸ್ವಾಮಿ ನಿರಶನ ಆರಂಭಿಸಿದರು. ಆದರೆ ನಿರಶನವು ಯಾವ ಪ್ರತಿಷ್ಠೆಗೆ ಅಥವಾ ದ್ವೇಷಕ್ಕೆ ಮಾಡುವಂತದ್ದಲ್ಲ ಎಂಬುದನ್ನು ಕುಮಾರಸ್ವಾಮಿ ಖಚಿತಪಡಿಸಿದರು
ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ 1500 ಕೋಟಿ ಮೌಲ್ಯ ಆಸ್ತಿ ಆರೋಪದ ಬಗ್ಗೆ ತನಿಖೆ ಕೈಗೊಳ್ಳಲಿ. ರಾಷ್ಟ್ರೀಯ ಪಕ್ಷದ ವಕ್ತಾರರೇ ಬಂದು ನಮ್ಮ ಕುಟುಂಬದ ವಿರುದ್ಧ ಏನು ಬಿಡುಗಡೆ ಮಾಡಿದ್ದಾರೋ ಅವರೀಗ ಸುಮ್ಮನೆ ಕೂತಿದ್ದಾರೆ. ಆ ಮೂಲಕ ಎಲ್ಲೋ ಒಂದು ಕಡೆ ಪಾಲಾಯನವಾದ ನೀತಿ ಅನುಸರಿಸಿರುವ ಸರಕಾರ ಹೇಡಿತನದ ನಿರ್ಧಾರ ಕೈಗೊಂಡಿದೆ ಎಂದು ಆಪಾದಿಸಿದರು.
ಕಳೆದ ಮೂರು ವರ್ಷಗಳಿಂದ ಬಿಜೆಪಿ ಪಕ್ಷವೇ ಆಡಳಿತದಲ್ಲಿದ್ದರು. ಆದರೆ ತಮ್ಮ ಕುಟುಂಬದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಸಾರ್ವಜನಿಕರಲ್ಲಿ ಒಂದು ರೀತಿಯ ತಪ್ಪು ಕಲ್ಪನೆ ಮೂಡಿಸಿದೆಯಲ್ಲದೆ ಕುಟುಂಬದ ಗೌರವ ಹಾಳು ಮಾಡಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ನನ್ನ ಆರೋಗ್ಯಕ್ಕಿಂತ ಮುಖ್ಯ ಈ ರಾಜ್ಯ ಜನತೆಯ ನಂಬಿಕೆಯಾಗಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಸಿಗಲೇಬೇಕು. ಈ ಹಿಂದೆ ರಾಜ್ಯದಲ್ಲಿ 20 ತಿಂಗಳ ಆಡಳಿತ ನಡೆಸಿದ ನನ್ನ ಮೇಲೆ ರಾಜ್ಯದ ಜನತೆ ವಿಶ್ವಾಸವಿರಿಸಿದ್ದಾರೆ. ಇನ್ನಷ್ಟು ಜನ ಬೆಂಬಲಿಗರು ಉಪವಾಸ ಘೋಷಣೆ ಮಾಡಿದ್ದಾರೆ. ನನ್ನ ಕುಟುಂಬದ ವಿರುದ್ಧ ಬಂದಿರುವ ಕಳಂಕದ ಹಿನ್ನಲೆಯಲ್ಲಿ ನಾನಿಲ್ಲಿ ನಿರಶನ ಕೂತಿದ್ದೇನೆ. ಆದರೆ ಇಲ್ಲಿ ದಂಡನೆ ಆಗಬೇಕಾರಿರುವುದು ನನಗೆ. ಹಾಗಾಗಿ ವೈಯಕ್ತಿಕವಾಗಿ ಬೆಂಬಲಿಗರಲ್ಲಿ ಸತ್ಯಾಗ್ರಹ ಹಿಂಪಡೆಯಲು ಕರೆ ನೀಡಿದರು.
ಕುಮಾರಸ್ವಾಮಿ ಸತ್ಯಾಗ್ರಹ ಬೆಂಬಲಿಸಿ ಮೈಸೂರಿನಲ್ಲೂ ಧರಣಿ ನಡೆಸಲಾಗುತ್ತಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಜಿ ಸಿಎಂ ಬೆಂಬಲಿಗರು ನಿರಶನ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ಬೆಂಬಲಿಗರು ಸಿಎಂ ಕುಟುಂಬದ ಆಸ್ತಿ ಬಗ್ಗೆಯೂ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.