ಕುಮಾರಸ್ವಾಮಿ ನಿರಶನ ಕೈಬಿಡಲು ಜೆಡಿಎಸ್ ಸಭೆಯಲ್ಲಿ ನಿರ್ಧಾರ
ಬೆಂಗಳೂರು, ಭಾನುವಾರ, 10 ಜುಲೈ 2011( 12:57 IST )
ಸರಕಾರ ಸಂಧಾನಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಕಳೆದೊಂದು ದಿನದಿಂದ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ತಮ್ಮ ಆಮರಣ ನಿರಶನ ಸತ್ಯಾಗ್ರಹವನ್ನು ಕೈಬಿಡಬೇಕೆಂಬ ಮಹತ್ವದ ನಿರ್ಧಾರವನ್ನು ಜೆಡಿಎಸ್ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.
ಆನಂತರ ಪಕ್ಷದ ಸಭೆಯ ನಂತರ ಮಾತನಾಡಿದ ಎಂ.ಸಿ. ನಾಣಯ್ಯ, ಸರಕಾರ ಸಂಧಾನಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಇಂತಹದೊಂದು ಕ್ರಮಕ್ಕೆ ಮುಂದಾಗಿಲ್ಲ. ಬದಲಾಗಿ ಪಕ್ಷಕ್ಕೆ ಕುಮಾರಸ್ವಾಮಿ ನಾಯಕತ್ವದ ಅಗತ್ಯವಿದೆ. ಹೀಗಾಗಿ ಅವರ ಆರೋಗ್ಯ ಕೆಟ್ಟರೆ ಪಕ್ಷದ ಆರೋಗ್ಯ ಕೆಡುತ್ತದೆ. ಹೀಗಾಗಿ ಅಮರಣ ನಿರಶನ ಕೈಬಿಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಗಿತ್ತು. ತನ್ನನ್ನು ತಾನೇ ಅಗ್ನಿಪರೀಕ್ಷೆಗೆ ಒಳಪಡಿಸುವುದು ಬಹಳ ಅಪರೂಪದ ಪ್ರಸಂಗ ನಾವಿಂದು ಕಂಡಿದ್ದೇವೆ. ಕುಮಾರಸ್ವಾಮಿ ನಿರಶನ ಅಂತ್ಯಗೊಳಿಸಬೇಕೆಂಬುದು ನಾಯಕರು ಹಾಗೂ ಕಾರ್ಯಕರ್ತರ ತೀರ್ಮಾನವಾಗಿದ್ದರಿಂದ ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ರಾಜ್ಯದ ಹಲವಾರು ಸಮಸ್ಯೆಗೆ ಪರಿಹಾರ ಸಿಗಬೇಕಾಗಿದೆ. ಅದು ಇಲ್ಲೇ ಕುಳಿತರೆ ಸಿಗುವುದಿಲ್ಲ. ಹೀಗಾಗಿ ನಿಮ್ಮ ದೇಹವನ್ನು ದಂಡಿಸಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಕೋರ್ಟ್ ಮುಂದೆ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಪಕ್ಷ ಹೋರಾಟ ಮಾಡುವುದಕ್ಕೆ ಸಿದ್ಧವಿದೆ. ಆದರೆ ಇದು ಸಂಧಾನದಿಂದ ಬಗೆಹರಿಯುವುದಿಲ್ಲ. ಕಾಂಗ್ರೆಸ್‌ನಿಂದಲೂ ಆಪಾದನೆಯಿದೆ, ಬಿಜೆಪಿಯಿಂದಲೂ ಆರೋಪವಿದೆ. ನಮ್ಮನಿಂದಲೂ ಆಪಾದನೆಯಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಲಿ ಎಂಬುದಕ್ಕೆ ಬದ್ಧರಾಗಿದ್ದೇವೆ ಎಂದರು.