ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಶಸ್ವಿ ಆಯ್ತು ಅನಂತಮೂರ್ತಿ ಸಂಧಾನ ಮಾತುಕತೆ (Anathamurthy | kumaraswamy | Indefinite fast | Yaddyurappa)
ಆಮರಣ ನಿರಶನ ನಿರತರಾಗಿದ್ದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಕೊನೆಗೂ ತಾಯಿ, ಪಕ್ಷದ ಕಾರ್ಯಕರ್ತರು ಹಾಗೂ ಹರಿಯ ಸಾಹಿತಿ ಯು. ಆರ್. ಅನಂತ ಮೂರ್ತಿ ಒತ್ತಡಕ್ಕೆ ಮಣಿದು ತಮ್ಮ ಸತ್ಯಾಗ್ರಹವನ್ನು ಹಿಂಪಡೆದಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತಮ್ಮ ಹಾಗೂ ಕುಟುಂಬದ ಮೇಲೆ ಮಾಡಿರುವ ಅಕ್ರಮ ಆಸ್ತಿ ತನಿಖೆಯನ್ನು ಸಿಬಿಐಗೆ ವಹಿಸದ ಹೊರತು ಸತ್ಯಾಗ್ರಹ ಕೊನೆಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದ ಕುಮಾರಸ್ವಾಮಿ ಕೊನೆಗೂ ಪಕ್ಷದ ಹಿರಿಯರ ಮಾತಿಗೆ ಮಣಿದು ಸತ್ಯಾಗ್ರಹ ಕೊನೆಗೊಳಿಸಲು ಮುಂದಾಗಿದ್ದರು.

ಇದಕ್ಕೂ ಮೊದಲು ತಮ್ಮ ವಿರುದ್ಧ ಹೊರಡಿಸಿರುವ ಚಾರ್ಜ್‌ಶೀಟ್ ಹಿಂಪಡೆಯುವಂತೆ ಸತ್ಯಾಗ್ರಹ ಸ್ಥಳಕ್ಕೆ ಸರಕಾರದ ಪ್ರತಿನಿಧಿಗಳಾಗಿ ಭಾನುವಾರ ಬೆಳಗ್ಗೆ ಆಗಮಿಸಿದ್ದ ಮೂವರು ಸಚಿವರುಗಳಿಗೆ ಕುಮಾರಸ್ವಾಮಿ ಆಗ್ರಹಿಸಿದ್ದರು. ಇವೆಲ್ಲಕ್ಕೂ ಓಕೆ ಎಂದಿದ್ದ ಸಂಧಾನಕಾರರು ಜಾರ್ಜ್‌ಶೀಟ್ ಎಂಬ ಪದ ಬದಲು ಆರೋಪ ಕೈಬಿಡಿ ಎಂದು ಉಲ್ಲೇಖಿಸಲು ಒಪ್ಪಿಗೆ ಸೂಚಿಸಿದ್ದರು.

ಇವೆಲ್ಲವೂ ಬೆಳಗ್ಗಿನ ಬೆಳವಣಿಗೆಗಳು. ಇಷ್ಟಕ್ಕೂ ಆರೋಗ್ಯ ಹದೆಗೆಟ್ಟಿದ್ದರೂ ಕುಮಾರಸ್ವಾಮಿ ತಮ್ಮ ಸತ್ಯಾಗ್ರಹ ವಾಪಾಸ್ ಪಡೆಯುವ ಯಾವುದೇ ಇರಾದೆಯಲ್ಲಿರಲಿಲ್ಲ. ಒಂದು ಕಡೆ ಪಕ್ಷದ ಮಹತ್ವದ ಸಭೆ ನಡೆಯುತ್ತಿದ್ದರೂ ಮತ್ತೊಂದೆಡೆ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ, ಮಾಜಿ ಸಿಎಂ ಮನವೊಳಿಸಲು ಯಶಸ್ವಿಯಾಗಿದ್ದರು. ಹೀಗಾಗಿ ಎಲ್ಲ ಕ್ರೆಡಿಟ್ ಅನಂತಮೂರ್ತಿ ಅವರಿಗೆ ಸಲ್ಲಲೇ ಬೇಕು.

ಈ ಸಂದರ್ಭದಲ್ಲಿ ಮಾತನಾಡಿದ್ದ ಅನಂತಮೂರ್ತಿ, ನಾನು ಎಚ್‌ಡಿಕೆ 'ಟೀಕಾಕಾರ ಹಾಗೂ ಅಭಿಮಾನಿ' ಎಂದಿದ್ದರು. ಎಚ್‌ಡಿಕೆ ಎನಾದರೂ ತಪ್ಪು ನಿರ್ಧಾರ ಕೈಗೊಂಡಲ್ಲಿ ತಕ್ಷಣ ನಾನದ್ದನ್ನು ಖಂಡಿಸುತ್ತೇನೆ. ಹಾಗೆಯೇ ಒಳ್ಳೆಯ ನಿರ್ಧಾರಕ್ಕೆ ಬೆನ್ನು ತಟ್ಟುತ್ತೇನೆ ಎಂದಿದ್ದಾರೆ.

ನಿರ್ಭಯದಿಂದ ಮಾತನಾಡಬಲ್ಲ ಒಬ್ಬ ಯುವ ರಾಜಕಾರಣಿ ಎಂದರೆ ಅವರು ಕುಮಾರಸ್ವಾಮಿ. ತಮ್ಮ ತಪ್ಪನ್ನು ಒಪ್ಪಿಕೊಳ್ಳಬಲ್ಲ ಹಿರಿಮೆಯುಳ್ಳವರು. ರಾಜಕಾರಣಿಗಳಿಂದ ತಪ್ಪಾಗುವುದು ಸಹಜ. ಈ ಹಿಂದೆ ಬಿಜೆಪಿ ಜತೆ ಮೈತ್ರಿ ಸರಕಾರ ನಡೆಸಿದ್ದ ಕುಮಾರಸ್ವಾಮಿ 20 ತಿಂಗಳ ಆಡಳಿತ ನಂತರ ಒಪ್ಪಂದ ಪ್ರಕಾರ ಅಧಿಕಾರವನ್ನು ಬಿ. ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದನ್ನು ತಕ್ಷಣ ನಾನು ಖಂಡಿಸಿದ್ದೆ ಎಂದಿದ್ದಾರೆ.

ಅವರ ತಂದೆಯವರ ಜತೆಗಂತೂ ನಿರ್ಭಯವಾಗಿ ಮಾತನಾಡುತ್ತೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಶೈಲಿಯನ್ನೇ ಬದಲಾಯಿಸಿದ್ದರು. ಆದ್ದರಿಂದ ಜನರಲ್ಲಿ ಭರವಸೆ ಮೂಡಿಸಿದ್ದರು. ಹೀಗಾಗಿ ಅವರ ದೇಹ ಆರೋಗ್ಯವಾಗಿರಬೇಕು, ಅವರಲ್ಲಿ ಶಕ್ತಿ ಇರಬೇಕು. ಮನಸ್ಸಿನಲ್ಲಿ ಶಾಂತಿ ಇರಬೇಕು. ಇದರಿಂದಾಗಿ ಸತ್ಯಾಗ್ರಹ ಕೈಬಿಡಬೇಕು ಎಂದು ಉಪದೇಶ ಮಾಡಿದರು.

ಈಗಿನ ರಾಜಕಾರಣವು ವೈಯಕ್ತಿಕವಾಗುತ್ತದೆ. ಇದು ಬಹಳ ಖೇದಕರ ಸಂಗತಿ ಎಂದು ತಿಳಿಸಿದ್ದ ಅನಂತಮೂರ್ತಿ, ಯಾವುದೇ ಪಕ್ಷದವರಾಗದ ನಾನು ಪ್ರಾಯದಲ್ಲಿ ಹಿರಿಯನಾಗಿ ನಿರಶನ ಅಂತ್ಯಗೊಳಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಅಲ್ಲದೆ ನನ್ನ ನಿವೇದನೆ ಏನಂದರೆ ಭವಿಷ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಪಕ್ಷ ಕಟ್ಟಿ. ಹಣದ ಅಗತ್ಯವಿಲ್ಲದ ರಾಜಕಾರಣ ಮಾಡಲು ಎಂಬುದು ಸಾಧ್ಯ ಎಂಬುದನ್ನು ಸಾಬೀತುಪಡಿಸಿ. ಭ್ರಷ್ಟಾಚಾರ ಯಾವುದೇ ಪಕ್ಷದಲ್ಲೂ ಕಂಡರೂ ಅದರ ವಿರುದ್ಧ ಹೋರಾಡಿ. ನನಗೆ ಗೊತ್ತು ಇದು ಬಹಳ ಕಷ್ಟ ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಹೇಳಿಕೆಗಳು ಕುಮಾರಸ್ವಾಮಿ ಅವರಿಗೆ ಸ್ಫೂರ್ತಿ ತುಂಬಿದ್ದವು ಎಂದರೆ ತಪ್ಪಾಗಲಾರದು.

ಮತ್ತೊಂದೆಡೆ ಜೆಡಿಎಸ್ ಪಕ್ಷದ ಸಭೆಯಲ್ಲೂ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಕುಮಾರಸ್ವಾಮಿ ತಮ್ಮ ಸತ್ಯಾಗ್ರಹ ಕೈಬಿಡುವಂತೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪಕ್ಷಕ್ಕೆ ತಮ್ಮ ಅಗತ್ಯವಿದೆ. ನಿಮ್ಮ ಆರೋಗ್ಯ ಹದೆಗೆಟ್ಟರೆ ಪಕ್ಷದ ಆರೋಗ್ಯ ಕೂಡಾ ಕೆಡುತ್ತದೆ ಎಂದು ನಾಣಯ್ಯ ಹೇಳಿಕೆ ನೀಡಿದ್ದರು.

ಇವೆಲ್ಲಕ್ಕೂ ಮಣಿದಿದ್ದ ಕುಮಾರಸ್ವಾಮಿ ಆಮರಣ ನಿರಶನ ಹಿಂಪೆಡೆಯುವುದಾಗಿ ಘೋಷಿಸಿ ಅನಂತಮೂರ್ತಿ ಅವರಿಂದ ಹಣ್ಣಿನ ರಸವನ್ನು ಸ್ವೀಕರಿಸುವ ಮೂಲಕ ಕಳೆದ ಕೆಲವು ದಿನಗಳ ರಾಜಕೀಯ ಬೆಳವಣಿಗೆಗಳಿಗೆ ಅಂತ್ಯ ಹಾಡಿದ್ದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ