ಭ್ರಷ್ಟಾಚಾರ ಆರೋಪದಡಿ ತಮ್ಮ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಕ್ರಮ ಆಸ್ತಿ ತನಿಖೆ ನಡೆಸಲು ಅನುಮತಿ ಕೋರಿ ವಕೀಲರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಕಾನೂನು ತಜ್ಞರೂ ಆಗಿರುವ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರು ಸಿ.ಎಂ. ಅಕ್ರಮ ಆಸ್ತಿ ತನಿಖೆಗೆ ಅನುಮತಿ ನೀಡಿದ್ದರು.
ರಾಜ್ಯಪಾಲರ ಕ್ರಮ ಸಂವಿಧಾನ ಬಾಹಿರವಾಗಿದೆ, ತಮ್ಮ ಆಸ್ತಿ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶವನ್ನು ಕೂಡಲೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವತಃ ತಮ್ಮ ಹೆಸರಿನಲ್ಲೇ ಗುರುವಾರ ಅರ್ಜಿ ಸಲ್ಲಿಸಿದ್ದು, ಈ ಕುರಿತ ವಿಚಾರಣೆ ನಾಳೆ ನಡೆಯಲಿದೆ.
ರಾಜ್ಯಪಾಲರು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ದುರುದ್ದೇಶದಿಂದಲೇ ಈ ರೀತಿಯ ಕ್ರಮ ಕೈಗೊಂಡಿದ್ದು, ತಮ್ಮ ಕಾನೂನು ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಯಡಿಯೂರಪ್ಪ ರಿಟ್ ಅರ್ಜಿಯಲ್ಲಿ ಆಪಾದಿಸಿದ್ದಾರೆ.
ಅಕ್ರಮ ಆಸ್ತಿ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ವಕೀಲರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಕಾನೂನು ಸಮರ ನಡೆಸುತ್ತಿದ್ದಾರೆ.