ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಧನಂಜಯ್ ಜೈಲಿಗಟ್ಟಿ; 'ಎಚ್‌ಡಿಕೆಗಿಂತ ಯಡಿಯೂರಪ್ಪ ಭ್ರಷ್ಟ' (Kumaraswamy | Dhanajay kumar | Santhosh hegde | Lokayuktha | Congress)
PR
ಗಣಿ ಹಗರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಬೇಡಿ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರ ಮೇಲೆ ಒತ್ತಡ ತರಲು ಹೋಗಿ ಬೆವರಿಳಿಸಿಕೊಂಡ ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಅವರನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಮೂಲಕ ಲೋಕಾಯುಕ್ತ ಹೇಳಿಕೆ ರಾಜ್ಯರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಲು ವೇದಿಕೆ ಒದಗಿಸಿಕೊಟ್ಟಂತಾಗಿದೆ.

ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲದ ಮೂಲಕ ರಾಜಕಾರಣಿಗಳನ್ನು ಖರೀದಿಸಿದರೆ, ಇದೀಗ ಲೋಕಾಯುಕ್ತರನ್ನೇ ಖರೀದಿಸುವ ದುಸ್ಸಾಹಸಕ್ಕೆ ಕೈಹಾಕಿರುವುದು ನಾಚಿಕೆಗೇಡಿನ ವಿಷಯ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಡಿಗೆ ಜನರ ಬಳಿಗೆ ಎರಡನೇ ಸುತ್ತಿನ ಹೋರಾಟಕ್ಕೆ ಶನಿವಾರ ಚಾಮರಾಜಪೇಟೆಯಲ್ಲಿ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬೆವರಿಳಿಸಿಕೊಂಡ ಧನಂಜಯ್ ಕುಮಾರ್: ಸಂತೋಷ್ ಹೆಗ್ಡೆ ನಿವೃತ್ತಿ ಸಮಯ ಹತ್ತಿರ ಬಂದಿದೆ. ಹೀಗಾಗಿ ಅವರು ಇತ್ತೀಚೆಗೆ ಸರಕಾರದ ವಿರುದ್ಧ ಗುಡುಗಿಲ್ಲ. ಹೀಗೆ ಇದನ್ನೇ ಬಂಡವಾಳ ಮಾಡಿಕೊಂಡ ಧನಂಜಯ್ ಕುಮಾರ್, ಹೋದಲ್ಲಿ-ಬಂದಲ್ಲಿ ಲೋಕಾಯುಕ್ತರ ವಿರುದ್ಧ ಅಪಪ್ರಚಾರ ನಡೆಸಲು ಆರಂಭಿಸಿದ್ದರು. ನಾನು ಲೋಕಾಯುಕ್ತರನ್ನು ಅಡ್ಜೆಸ್ಟ್ ಮಾಡಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಅವರಿಗೆ ರಾಜಿ ಮಾಡಿಸಿದ್ದೇನೆ. ಅವರು ಗಣಿ ಹಗರಣದ ವರದಿ ನೀಡುವುದಿಲ್ಲ ಎಂದು ವದಂತಿ ಹಬ್ಬಿಸುತ್ತಿದ್ದರು.

ಅಂತೂ ಇಂತೂ ಈ ವಿಷಯ ಲೋಕಾಯುಕ್ತರ ಕಿವಿಗೂ ತಲುಪಿತ್ತು. ಕೆಲ ದಿನಗಳ ಹಿಂದೆ ಲೋಕಾಯುಕ್ತರಿಗೆ ಧನಂಜಯ್ ಕುಮಾರ್ ಯೋಗ ಕ್ಷೇಮ ವಿಚಾರಿಸಲು ದೂರವಾಣಿ ಕರೆ ಮಾಡಿದಾಗ, ಎಡಬಿಡಂಗಿ ಮಾತು, ಅಪಪ್ರಚಾರದ ಬಗ್ಗೆ ಪ್ರಶ್ನಿಸಿ ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದರು. ಧನಂಜಯ್ ಕುಮಾರ್‌ ಮುಖಕ್ಕೆ ಮಂಗಳಾರತಿ ಮಾಡಿರುವುದನ್ನು ಸ್ವತಃ ಸಂತೋಷ್ ಹೆಗ್ಡೆಯವರು ಕನ್ನಡಪ್ರಭಕ್ಕೆ ಖಚಿತಪಡಿಸಿದ್ದರು.

PR
ಕುಮಾರಸ್ವಾಮಿಗಿಂತ ಯಡಿಯೂರಪ್ಪ ಹೆಚ್ಚು ಭ್ರಷ್ಟ:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗಿಂತ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತ್ಯಂತ ಭ್ರಷ್ಟ ಎಂಬ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಗಂಭೀರ ಆರೋಪ ಇದೀಗ ರಾಜ್ಯರಾಜಕಾರಣದಲ್ಲಿ ರಾಜಕೀಯ ಸಮರಕ್ಕೆ ಎಡೆಮಾಡಿಕೊಟ್ಟಿದೆ.

ಗಣಿ ಹಗರಣದ ವರದಿ ನೀಡಬಾರದು ಎಂದು ಬಿಜೆಪಿ ಮುಖಂಡರೊಬ್ಬರು ಒತ್ತಡ ಹೇರಿದ್ದು, ಲಂಚ ಪುರಾಣದಲ್ಲಿ ಶಾಸಕ ಸಂಪಂಗಿಯನ್ನು ಬಂಧಿಸಿದ ಸಂದರ್ಭದಲ್ಲಿಯೂ ಬಿಜೆಪಿ ಸಚಿವರೊಬ್ಬರು ಒತ್ತಡ ಹೇರಿರುವುದು...ಗಣಿ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರನ್ನು ಕೈಬಿಡುವಂತೆ ಕೆಲ ಸಚಿವರ ಒತ್ತಡ...ಹೀಗೆ ಹಲವು ವಿಷಯದ ಬಗ್ಗೆ ಸುವರ್ಣ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೆಗ್ಡೆ ಬಿಚ್ಚಿಟ್ಟಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಲೋಕಾಯುಕ್ತರ ಮೇಲೆ ಒತ್ತಡ ಹೇರಿರುವ ಧನಂಜಯ್ ಕುಮಾರ್ ಸೇರಿದಂತೆ ಬಿಜೆಪಿ ಕೆಲ ಸಚಿವರನ್ನು ಜೈಲಿಗಟ್ಟುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿಗಿಂತ ಯಡಿಯೂರಪ್ಪ ಭ್ರಷ್ಟ ಎಂಬ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ, ಯಡಿಯೂರಪ್ಪ ಅಪರಾಧಿ ಸ್ಥಾನದಲ್ಲಿರುವುದು ಹೆಗ್ಡೆಯವರ ಹೇಳಿಕೆಯಿಂದ ಸಾಬೀತಾಗಿದೆ. ಯಡಿಯೂರಪ್ಪ ಅತ್ಯಂತ ಕಡು ಭ್ರಷ್ಟ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ ಎಂದ ಅವರು, ಸಿಎಂ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಗಣಿ ಹಗರಣದ ವರದಿಯನ್ನು ನೀಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಧನಂಜಯ್ ಕುಮಾರ್ ಮೂಲಕ ಲೋಕಾಯುಕ್ತರ ಮೇಲೆ ಒತ್ತಡ ಹೇರಿ ಮಾನಸಿಕ ಹಿಂಸೆ ನೀಡಿರುವುದು ಇದೀಗ ಜಗಜ್ಜಾಹೀರಾಗಿದೆ ಎಂದು ದತ್ತಾ ವಾಗ್ದಾಳಿ ನಡೆಸಿದರು.

ಸದ್ಯದಲ್ಲೇ ಗಣಿ ಹಗರಣ ವರದಿ ಸ್ಫೋಟಿಸಲಿದೆ:
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಆರೋಪ-ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟ ಗಣಿ ಹಗರಣದ ವರದಿ ಇನ್ನು ಕೆಲವೇ ದಿನಗಳಲ್ಲಿ ಸಲ್ಲಿಸುವುದಾಗಿ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ರಾಜ್ಯದ ಮಟ್ಟಿಗೆ ಇದೊಂದು ಅತ್ಯಂತ ದೊಡ್ಡ ಮಟ್ಟದ ಹಗರಣದ ಎಂದು ಪರೋಕ್ಷವಾಗಿ ಸೂಚನೆ ನೀಡಿರುವ ಅವರು, ಯಾರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಸೇರಿದಂತೆ ಪ್ರತಿಯೊಂದು ಸಮಗ್ರ ಮಾಹಿತಿ ನೀಡಿದ್ದೇನೆ ಎಂದು ವಿವರಿಸಿದರು. ಅಲ್ಲದೇ ತಾನು ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ವರದಿ ಕೊಟ್ಟ ನಂತರವೂ ಗಣಿಗಾರಿಕೆ ದುಪ್ಪಟ್ಟಾಗಿರುವುದು ಗಮನಕ್ಕೆ ಬಂದಿದೆ ಎಂದು ಹೇಳುವ ಮೂಲಕ ಗಣಿ ಹಗರಣದ ವರದಿ ರಾಜ್ಯರಾಜಕಾರಣದಲ್ಲಿ ಮತ್ತೊಂದು ಸಂಚಲನ ಮೂಡಿಸುವುದು ಸ್ಪಷ್ಟವಾಗಿದೆ.
ಇವನ್ನೂ ಓದಿ