ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬಿಜೆಪಿ ಹೈಕಮಾಂಡ್‌ನಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಹೆಗ್ಡೆ ಬಿಜೆಪಿಗೆ ರಕ್ಷಕರಾಗಿದ್ದಾರೆ. ಆ ನಿಟ್ಟಿನಲ್ಲಿ ಅವರು ಲೋಕಾಯುಕ್ತರಾಗಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಕಾಂಗ್ರೆಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಗಂಭೀರವಾಗಿ ಆರೋಪಿಸುವ ಮೂಲಕ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ನಗರದ ಸುಬ್ರಹ್ಮಣ್ಯನಗರದಲ್ಲಿ ಭಾನುವಾರ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ಧನಂಜಯ್ ಕುಮಾರ್, ವಿ.ಎಸ್.ಆಚಾರ್ಯ ಮತ್ತು ಎ.ಜಿ.ಕೊಡ್ಗಿ ಲೋಕಾಯುಕ್ತರ ಮೇಲೆ ಒತ್ತಡ ಹೇರಿರುವ ವಿಷಯವನ್ನು ಅವರಾಗಿಯೇ ಯಾಕೆ ಈ ಮೊದಲು ಹೇಳಿಲ್ಲ?. ಅವರು ಸತ್ಯಹರಿಶ್ಚಂದ್ರ ಆಗಿದ್ದರೆ ಈ ವಿಷಯ ಬಹಿರಂಗಪಡಿಸಬೇಕಿತ್ತು. ಆದರೆ ಈ ವಿಷಯ ಹೊರಹಾಕಿದ್ದು ಮಾಧ್ಯಮಗಳು. ಆ ನಿಟ್ಟಿನಲ್ಲಿ ಅವರನ್ನು ಸತ್ಯಹರಿಶ್ಚಂದ್ರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಲೋಕಾಯುಕ್ತ ಹೆಗ್ಡೆ ಬಿಜೆಪಿಯ ರಕ್ಷಕರಾಗಿರುವುದಾಗಿ ದೂರಿರುವ ಹರಿಪ್ರಸಾದ್, ಈ ಬಗ್ಗೆ ಅವರ ಜತೆ ಮುಖಾಮುಖಿ ಚರ್ಚೆಗೂ ಸಿದ್ಧ ಎಂದು ಸವಾಲು ಕೂಡ ಹಾಕಿದ್ದಾರೆ. ಅವರು ಲೋಕಾಯುಕ್ತರಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರೆ ಈಗಾಗಲೇ ಬಿಜೆಪಿಯ 10-15 ಮಂದಿ ಜೈಲಿಗೆ ಹೋಗಬೇಕಿತ್ತು. ಆದರೆ ಅವರು ರಕ್ಷಣೆ ನೀಡುವ ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ಲೋಕಾಯುಕ್ತ ಹುದ್ದೆಯನ್ನು ಅಪವಿತ್ರಗೊಳಿಸಿರುವುದಾಗಿ ಆರೋಪಿಸಿದರು.
ಬಿಜೆಪಿಯವರು ಅವರ ಜತೆ ಡೀಲ್ ಮಾಡಲು ಬಂದ ವಿಷಯವನ್ನು ಆ ಸಂದರ್ಭದಲ್ಲೇ ಹೇಳ್ಬೇಕಿತ್ತು. ಬಹುಶಃ ಡೀಲ್ ಕುದುರದೆ ಇದ್ದ ಕಾರಣ, ಈಗ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ವಿಷಯ ಪ್ರಸ್ತಾಪಿಸಿರುವುದಾಗಿ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.