ಭೂಹಗರಣದ ವಿಚಾರಣೆ, ಅಕ್ರಮ ಗಣಿಯ ಅಂತಿಮ ವರದಿಯನ್ನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಲ್ಲಿಸಲು ದಿನಗಣನೆ ಆರಂಭವಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಲ್ಯಾಕ್ಸ್ ಪಡೆಯಲು ಮಂಗಳವಾರ ಮುಂಜಾನೆ 5.55ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕುಟುಂಬ ಸದಸ್ಯರ ಸಹಿತ ಮಾರಿಷಸ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಇದೀಗ ಮುಖ್ಯಮಂತ್ರಿಗಳು ಏಕಾಏಕಿ ರಾಜ್ಯದಲ್ಲಿ ಸಾಕಷ್ಟು ಪ್ರವಾಹ ಪರಿಸ್ಥಿತಿ, ಭೂ ಹಗರಣದ ವಿಚಾರಣೆ ನಡೆಯುತ್ತಿದ್ದರೂ ಕೂಡ ದಿಢೀರ್ ಅಂತ ಪುತ್ರ ರಾಘವೇಂದ್ರ, ಪುತ್ರಿ, ಮೊಮ್ಮಕ್ಕಳ ಜತೆ ಮಾರಿಷಸ್ ಪ್ರವಾಸ ಕೈಗೊಳ್ಳುವ ಅಗತ್ಯವಾದರೂ ಏನಿತ್ತು ಎಂಬುದಾಗಿ ಪ್ರತಿಪಕ್ಷಗಳು ಕಿಡಿಕಾರಿವೆ.
ಒತ್ತಡ, ಕಿರಿಕಿರಿ ಉಂಟಾದಾಗ ಯಡಿಯೂರಪ್ಪನವರು ತಮಿಳುನಾಡು, ಕೇರಳದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಅದೂ ತಮ್ಮ ಆಪ್ತ ಲೆಹರ್ ಸಿಂಗ್ ಮತ್ತಿತರ ಜತೆ. ಆದರೆ ಈ ಬಾರಿ ತೀರಾ ಖಾಸಗಿಯಾಗಿ ಕುಟುಂಬ ಸಹಿತ ಮಾರಿಷಸ್‌ಗೆ ಒಂದು ವಾರಗಳ ಕಾಲ ತೆರಳುತ್ತಿರುವುದು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಮುಜುಗರ ತಪ್ಪಿಸಿಕೊಳ್ಳಲು ಪ್ರವಾಸ? ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆಯವರು ಈ ವಾರದಲ್ಲಿ ಸಲ್ಲಿಸಲಿರುವ ಅಕ್ರಮ ಗಣಿ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರು ಸೇರ್ಪಡೆಯಾಗಿರುವುದು ಖಚಿತವಾಗಿದೆ. ಈ ಕಾರಣದಿಂದಲೇ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ವಿದೇಶ ಸುತ್ತಿದರೆ ಹೆಚ್ಚು ಅನುಭವ ಸಿಗುತ್ತೆ-ಸಿಎಂ: ಮುಂಜಾನೆ ಮಾರಿಷಸ್‌ಗೆ ತೆರಳುತ್ತಿರುವ ಸಂದರ್ಭದಲ್ಲಿಯೇ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಮಾರಿಷಸ್ ಉತ್ತಮ ಪ್ರವಾಸಿ ತಾಣ. ಹಾಗಾಗಿ ಕುಟುಂಬ ಸಮೇತ ಒಂದು ವಾರಗಳ ಕಾಲ ಪ್ರವಾಸಕ್ಕೆ ತೆರಳುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿಯಾದವರು ಹೆಚ್ಚು, ಹೆಚ್ಚು ವಿದೇಶಗಳನ್ನು ಸುತ್ತಿದರೆ ಅಲ್ಲಿನ ಅಭಿವೃದ್ಧಿ, ಪ್ರವಾಸೋದ್ಯಮದ ಬಗ್ಗೆ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ರೀತಿ ಕುಟುಂಬ ಸಮೇತ ಪ್ರವಾಸಕ್ಕೆ ಹೋಗದೆ ತುಂಬಾ ವರ್ಷವಾಯಿತು. ಮಕ್ಕಳು, ಮೊಮ್ಮಕ್ಕಳು ಅಪೇಕ್ಷೆ ಪಟ್ಟಿದ್ದರಿಂದ ಅವರ ಜತೆಗೂಡಿ ಹೋಗುತ್ತಿದ್ದೇನೆ. ಆದರೆ ಅಧಿಕಾರಿಗಳ ನಿತ್ಯ ಸಂಪರ್ಕದಲ್ಲಿರುತ್ತೇನೆ. ಒಂದು ವೇಳೆ ತುರ್ತು ಅಗತ್ಯ ಬಿದ್ದರೆ, ಪ್ರವಾಸ ಮೊಟಕುಗೊಳಿಸಿ ರಾಜ್ಯಕ್ಕೆ ವಾಪಸ್ ಆಗುವುದಾಗಿ ಸ್ಪಷ್ಟನೆ ನೀಡಿದರು.