ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೆಗ್ಡೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಹರಿಪ್ರಸಾದ್ (Lokayuktha | Hari prasad | Congress | AICC | Santhosh Hegde | BJP)
ಹೆಗ್ಡೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಹರಿಪ್ರಸಾದ್
ಬೆಂಗಳೂರು, ಗುರುವಾರ, 21 ಜುಲೈ 2011( 11:41 IST )
PR
ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾನಸಿಕ ಸಮತೋಲನ ಕಳೆದುಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತ ಹೆಗ್ಗೆ ಕೇವಲ ಮಾತನಾಡುತ್ತಾರಷ್ಟೇ, ಕೃತಿಯಲ್ಲಿ ಏನೂ ತೋರಿಸುವುದಿಲ್ಲ ಎಂದು ಕಟುವಾಗಿ ಟೀಕಿಸಿದರು.
ನಾಯಿಗಳು ಬೊಗಳಿದರೆ ಅದಕ್ಕೆ ನಾನೇನು ಸಾಧ್ಯವಿಲ್ಲ. ಅದನ್ನು ಪಾಲಿಕೆಯವರು ನೋಡಿಕೊಳ್ಳುತ್ತಾರೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳುವ ಮೂಲಕ ತಮ್ಮನ್ನು ಟೀಕಿಸುವ ಕಾಂಗ್ರೆಸ್ ಮುಖಂಡರಿಗೆ ಈ ರೀತಿ ತಿರುಗೇಟು ನೀಡಿದ್ದರು. ಈ ಹೇಳಿಕೆಯಿಂದ ಕೆರಳಿದ ಹರಿಪ್ರಸಾದ್ ಸಂತೋಷ್ ಹೆಗ್ಡೆಯವರ ವಿರುದ್ಧ ಕಟುವಾಗಿ ಕಿಡಿಕಾರಿದ್ದಾರೆ.
ಅಕ್ರಮ ಗಣಿ ವರದಿಗೆ ಸಂಬಂಧಿಸಿದಂತೆ ಅವರ ಮೇಲೆ ಒತ್ತಡ ಹೇರಲು ಬಂದ ಬಿಜೆಪಿ ಮುಖಂಡ ಧನಂಜಯ್ ಕುಮಾರ್ ಮೇಲೆ ಆ ಸಂದರ್ಭದಲ್ಲೇ ಕೇಸ್ ದಾಖಲಿಸಬೇಕಿತ್ತು. ಅದನ್ನು ಬಿಟ್ಟು ಇಷ್ಟು ದಿನ ಕಾಯುವ ಅಗತ್ಯವಾದರೂ ಏನಿತ್ತು ಖಾರವಾಗಿ ಪ್ರಶ್ನಿಸಿರುವ ಹರಿಪ್ರಸಾದ್, ಅಕ್ರಮ ಗಣಿ ವರದಿಯಲ್ಲಿ ಏನೇನಿದೆ ಎಂಬುದು ಅದು ಸಲ್ಲಿಕೆಯಾದ ಮೇಲಷ್ಟೇ ನೋಡಬೇಕು ಎಂದು ಹೇಳಿದರು.
ಲೋಕಾಯುಕ್ತರು ನೀಡುವ ಹೇಳಿಕೆಗಳಿಗೆಲ್ಲ ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಸಣ್ಣ, ಸಣ್ಣ ಮೀನು ಹಿಡಿದು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದ ಹೆಗ್ಡೆಯವರಿಗೆ ತಿಮಿಂಗಿಲಗಳನ್ನು ಹಿಡಿಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮಟ್ಟಿಗೆ ಭ್ರಷ್ಟಾಚಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಹೆಗ್ಡೆಯವರೇ ರಕ್ಷಕರಾಗಿದ್ದಾರೆ ಎಂದು ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದ ಹರಿಪ್ರಸಾದ್, ಅವರ ಜತೆ ಮುಖಾಮುಖಿ ಚರ್ಚೆಗೂ ಸಿದ್ದ ಎಂದು ಸವಾಲು ಹಾಕಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಹೆಗ್ಡೆಯವರು, ಹರಿಪ್ರಸಾದ್ ಮೊದಲು ಅವರ ಪೂರ್ವಾಶ್ರಮವನ್ನು ನೆನಪುಮಾಡಿಕೊಳ್ಳಲಿ. ಅಲ್ಲದೇ ತಾನು ಅವರ ಸವಾಲನ್ನು ಸ್ವೀಕರಿಸಿದ್ದು, ಮುಖಾಮುಖಿ ಚರ್ಚೆಗೆ ಸಿದ್ದ ಎಂದು ಹೇಳಿದ್ದರು.