ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಲ್ಲಿಕೆ ಮುನ್ನವೇ ಅಕ್ರಮ ಗಣಿ ವರದಿ ಸ್ಫೋಟ; ಯಾರೆಲ್ಲ ಭಾಗಿ? (Santhosh hegde | Lokayuktha | Illigal mining | Yeddyurappa | Kumaraswamy)
ಸಲ್ಲಿಕೆ ಮುನ್ನವೇ ಅಕ್ರಮ ಗಣಿ ವರದಿ ಸ್ಫೋಟ; ಯಾರೆಲ್ಲ ಭಾಗಿ?
ಬೆಂಗಳೂರು, ಗುರುವಾರ, 21 ಜುಲೈ 2011( 10:11 IST )
PR
ಅಕ್ರಮ ಗಣಿಗಾರಿಕೆಯ ಅಂತಿಮ ವರದಿ ಅಧಿಕೃತವಾಗಿ ಸಲ್ಲಿಕೆಯಾಗುವ ಮೊದಲೇ ಗಣಿ ವರದಿ ಸೋರಿಕೆಯಾಗಿದ್ದು ಆಡಳಿತಾರೂಢ ಬಿಜೆಪಿ ಸೇರಿದಂತೆ ಮೂರು ಪಕ್ಷಗಳಲ್ಲಿ ತಳಮಳ ಉಂಟಾಗಿದೆ. ಅಂತಿಮ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವಸತಿ ಸಚಿವ ವಿ.ಸಚಿವ ಹೆಸರು ದಾಖಲಾಗಿರುವುದು ಬಯಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲೇ ವರದಿಯಲ್ಲಿರುವ ಸ್ಫೋಟಕ ಅಂಶವನ್ನು ಟೈಮ್ಸ್ ನೌ ಬಟಾಬಯಲು ಮಾಡಿರುವುದು ರಾಜಕೀಯ ಪಕ್ಷ ಸೇರಿದಂತೆ ಸ್ವತಃ ಲೋಕಾಯುಕ್ತ ಹೆಗ್ಡೆಯವರೇ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಅಕ್ರಮ ಗಣಿಗಾರಿಕೆ ಕುರಿತು ಒಂಬತ್ತು ಸಾವಿರ ಪುಟಗಳ ಬೃಹತ್ ವರದಿಯನ್ನು ಈ ವಾರದಲ್ಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆ ಕೊಟ್ಟ ಬೆನ್ನಲ್ಲೇ ವರದಿ ಸೋರಿಕೆಯಾಗಿರುವುದು ರಾಜ್ಯರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.
ವರದಿಯಲ್ಲಿ ಯಾರೆಲ್ಲರ ಹೆಸರು ಪ್ರಸ್ತಾಪವಾಗಿದೆ? ಮುಖ್ಯಮಂತ್ರಿ ಯಡಿಯೂರಪ್ಪ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2009ರ ಏಪ್ರಿಲ್‌ನಿಂದ 2010ರ ಮೇ ಅವಧಿಯಲ್ಲಿ ಕೈಗೊಂಡ ಕ್ರಮಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ 1847 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಅಳಿಯನ ಪಾಲುದಾರಿಕೆಯಲ್ಲಿರುವ ಧವಳಗಿರಿ ಪ್ರಾಪರ್ಟೀಸ್ ಒಡೆತನದಲ್ಲಿದ್ದ ಆಸ್ತಿಯನ್ನು ಮಾರುಕಟ್ಟೆ ದರಕ್ಕಿಂತ 20ಪಟ್ಟು ಹೆಚ್ಚು ಬೆಲೆಗೆ ಗಣಿಗಾರಿಕೆ ಕಂಪನಿಗೆ ಮಾರಾಟ ಮಾಡಿ, ಆ ಕಂಪನಿಯಿಂದ ಹತ್ತು ಕೋಟಿ ರೂ.ಗಳನ್ನು ಮಗನ ಪಾಲುದಾರಿಕೆಯ ಶಿವಮೊಗ್ಗದಲ್ಲಿರುವ ಪ್ರೇರಣಾ ಎಜುಕೇಷನ್ ಟ್ರಸ್ಟ್‌ಗೆ ಲಂಚ ಪಡೆದಿರುವುದು ಸಿಎಂ ಮೇಲಿನ ಆರೋಪವಾಗಿದೆ.
ಜನಾರ್ದನ ರೆಡ್ಡಿ: ಬಳ್ಳಾರಿಯಲ್ಲಿ ಖಾಸಗಿ ಜಹಗೀರಾಗಿ ಪರಿವರ್ತಿಸಿರುವುದು. ಅಕ್ರಮ ಗಣಿಗಾರಿಕೆ ಮೂಲಕ ಶೇ.40ರಿಂದ 45ರಷ್ಟು ಲಂಚ ಬರಲು ಬೇಕಾದ ಎಲ್ಲ ಮಾರ್ಗೋಪಾಯವನ್ನು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಕಂಡುಕೊಂಡಿರುವುದಾಗಿ ವರದಿಯಲ್ಲಿ ತಿಳಿಸಿದೆ. ಸರ್ಕಾರಿ ಅಧಿಕಾರಿಗಳು ರೆಡ್ಡಿಯ ಆಜ್ಞಾನುಯಾಯಿಗಳು. ಲಂಚ ನೀಡಲು ನಿರಾಕರಿಸುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿ ಬೇನಾಮಿ ಹೆಸರಿನ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸಕ್ರಮವಾಗಿ ಗಣಿಗಾರಿಕೆ ನಡೆಸುವ ಸಂಸ್ಥೆಗಳ ಜಮೀನು ಮತ್ತು ಪರವಾನಿಗೆಗಳನ್ನು ತಮ್ಮ ಸಂಸ್ಥೆಗಳಿಗೆ ಮಾರಾಟ ಮಾಡುವಂತೆ ಒತ್ತಡ ಹೇರುವಲ್ಲಿ ನಿಸ್ಸೀಮರು ಎಂದು ಉಲ್ಲೇಖಿಸಲಾಗಿದೆ.
ಕರುಣಾಕರ ರೆಡ್ಡಿ: ಕಂದಾಯ ಸಚಿವ ಕರುಣಾಕರ ರೆಡ್ಡಿಗೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆ, ಸಾಗಣೆ ಆರೋಪ, ಹಣಕಾಸು ವಹಿವಾಟಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿರುವುದಾಗಿ ವರದಿಯಲ್ಲಿ ಹೇಳಿದೆ.
ಶ್ರೀರಾಮುಲು: ಆರೋಗ್ಯ ಸಚಿವ ಶ್ರೀರಾಮುಲು ಅವರು ಓಬಳಾಪುರಂ ಗಣಿ ಕಂಪನಿಯ ಮೂಲಕ ಅಕ್ರಮ ಗಣಿಗಾರಿಕೆ ನಂಟು ಹೊಂದಿರುವುದಾಗಿ ವರದಿ ತಿಳಿಸಿದೆ.
WD
ಎಚ್‌ಡಿ ಕುಮಾರಸ್ವಾಮಿ-ಅನಿಲ್ ಲಾಡ್: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಂತಕಲ್ ಎಂಟರ್‌ಪ್ರೈಸಸ್ ಹಾಗೂ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದನ್ನು ವರದಿ ದಾಖಲಿಸಿದೆ. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವೈಯಕ್ತಿಕ ಪ್ರಭಾವ ಬೀರಿ ಗಣಿಗಾರಿಕೆಗೆ ಅನುಮತಿ ಕೊಡಿಸಿದರು ಎಂಬ ಪ್ರಧಾನ ಕಾರ್ಯದರ್ಶಿ ಹೇಳಿಕೆಯನ್ನು ಲೋಕಾಯುಕ್ತ ವರದಿ ತಿಳಿಸಿದೆ.
ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಕೂಡ ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದರ ಖಚಿತ ದಾಖಲೆಯನ್ನು ವರದಿ ಒಳಗೊಂಡಿದೆ.
ಬಿಜೆಪಿ ಶಾಸಕ ಬಿ.ನಾಗೇಂದ್ರ, ಸಚಿವ ಸೋಮಣ್ಣ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರಿಬ್ಬರು ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವುದರ ಬಗ್ಗೆ ಮಾಹಿತಿ ವರದಿಯಲ್ಲಿದೆ.
PR
ವರದಿ ಸೋರಿಕೆ ಹಿಂದೆ ಸಿಎಂ ಕೈವಾಡ? ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತರ ತನಿಖಾ ವರದಿ ಸೋರಿಕೆಯಾಗಿರುವುದರ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈವಾಡ ಇರುವುದರ ಬಗ್ಗೆಯೂ ವ್ಯಾಪಕ ಶಂಕೆ ವ್ಯಕ್ತವಾಗತೊಡಗಿದೆ. ಲೋಕಾಯುಕ್ತರು ಅಧಿಕೃತವಾಗಿ ವರದಿ ಸಲ್ಲಿಸಿದ ನಂತರ ವಿಧಾನ ಮಂಡಲದಲ್ಲಿ ಮಂಡಿಸಿ, ಅದರ ಮೇಲೆ ಮೂರು ತಿಂಗಳಿಗೊಮ್ಮೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈ ವರದಿ ತಮ್ಮ ಸರ್ಕಾರಕ್ಕೆ ಕಂಟಕ ಎಂಬುದನ್ನು ಅರಿತ ಸಿಎಂ ದೆಹಲಿ ನಾಯಕರೊಬ್ಬರ ಮೂಲಕ ವರದಿ ಬಹಿರಂಗಪಡಿಸುವುದಕ್ಕೆ ವ್ಯವಸ್ಥೆ ಮಾಡಿ ಮಾರಿಷಸ್‌ಗೆ ತೆರಳಿದ್ದಾರೆನ್ನಲಾಗಿದೆ. ಕಮಿಷನ್ ಆಪ್ ಎನ್‌ಕ್ವಯರಿ ಆಕ್ಟ್ ಪ್ರಕಾರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವುದಕ್ಕೆ ಮುನ್ನ ಬಹಿರಂಗವಾಗಕೂಡದು. ಹಾಗಾದಾಗ ತಿರಸ್ಕರಿಸುವುದಕ್ಕೆ ಕಾನೂನು ಪ್ರಕಾರ ಅವಕಾಶ ಇದೆ.
ಕಾನೂನಿನ ಈ ಮರ್ಮ ಅರಿತ ಯಡಿಯೂರಪ್ಪ ದೆಹಲಿ ನಾಯಕರೊಬ್ಬರ ಸಹಾಯ ಪಡೆದು ರಾಷ್ಟ್ರೀಯ ಮಾಧ್ಯಮಕ್ಕೆ ವರದಿಯ ಸಾರಾಂಶ ರವಾನೆ ಮಾಡಿದ್ದಾರೆ ಎಂಬ ಗುಲ್ಲೆಬ್ಬಿದೆ.