ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ವರದಿ ಸೋರಿಕೆ: ಧನಂಜಯ್, ಎಚ್‌ಡಿಕೆ ಏನೆನ್ನುತ್ತಾರೆ? (Dhananjay Kumar | BJP | Lokayuktha | Illigal mining Report | Congress | Siddu)
ಅಕ್ರಮ ಗಣಿಗಾರಿಕೆ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರು ವಿಭಿನ್ನ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

WD
ವರದಿ ಸೋರಿಕೆ ಅಚ್ಚರಿ ತಂದಿದೆ-ಈಶ್ವರಪ್ಪ
ಅಕ್ರಮ ಗಣಿಗಾರಿಕೆಯ ವರದಿ ಸೋರಿಕೆಯಾಗಿರೋದು ನಿಜ. ಆದರೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿರುವುದು ಅಚ್ಚರಿ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ವರದಿ ಸೋರಿಕೆಯಾಗಿರುವುದರಿಂದ ಅದರ ಪಾವಿತ್ರ್ಯತೆ ಬಗ್ಗೆ ಅನುಮಾನ ಉಂಟಾಗಿದೆ ಎಂದು ಹೇಳಿರುವ ಈಶ್ವರಪ್ಪ, ವರದಿ ಸಂಪೂರ್ಣವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಲಿ. ನಂತರ ಪಕ್ಷದ ಮುಖಂಡರು ಭಾಗಿಯಾಗಿರುವ ವಿಷಯದ ಬಗ್ಗೆ ಪಕ್ಷದ ನಿಲುವು ಏನು ಎಂಬುದರ ಬಗ್ಗೆ ಸ್ಪಷ್ಟಪಡಿಸಲಾಗುವುದು ಎಂದು ಶಿವಮೊಗ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಾರೆ.

WD
ನನ್ನಿಂದ ಯಾವುದೇ ತಪ್ಪಾಗಿಲ್ಲ, ನಾನು ಪಲಾಯನವಾದಿಯಲ್ಲ:ಕುಮಾರಸ್ವಾಮಿ
ಅಕ್ರಮ ಗಣಿಗಾರಿಕೆ ವರದಿ ಸೋರಿಕೆಯಾಗಿರುವುದು ಈಗಾಗಲೇ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದರಲ್ಲಿನ ಅಂಶ ಕೂಡ ಸತ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಾಡಿರುವ ಆರೋಪ ಸಾಬೀತಾದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣಿ ವರದಿಯಲ್ಲಿ ನಿಮ್ಮ ಹೆಸರು ಕೂಡ ಇದೆಯಲ್ಲ ಎಂಬ ಪ್ರಶ್ನೆಗೆ. ವರದಿಯಲ್ಲಿ ನನ್ನ ಹೆಸರು ಇರುವುದು ಸೋರಿಕೆಯಾಗಿರುವ ವರದಿಯಲ್ಲಿ ಕಂಡುಬಂದಿದೆ. ಆದರೆ ನನ್ನಿಂದ ಯಾವುದೇ ತಪ್ಪಾಗಿಲ್ಲ. ಹಾಗಂತ ನಾನು ಲೋಕಾಯುಕ್ತರ ವರದಿ ಬಗ್ಗೆ ಆರೋಪ ಹೊರಿಸುವುದಿಲ್ಲ. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ದ. ಹಾಗಂತ ನಾನು ಪಲಾಯನವಾದಿಯಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ನನ್ನ ಅಧಿಕಾರಾವಧಿಯಲ್ಲಿ ಎರಡು ಕಂಪನಿಗಳಿಗೆ ಶಿಫಾರಸು ಮಾಡಿರುವ ಅಂಶ ಸೇರಿದಂತೆ ನಮ್ಮ ಕುಟುಂಬದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನಾನೇ ಒತ್ತಾಯಿಸಿದ್ದೇನೆ. ಲೋಕಾಯುಕ್ತರು ನೀಡಿರುವ ವರದಿಗೆ ತಲೆಬಾಗುತ್ತೇನೆ. ಅವರ ವರದಿ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

PR
ಗಣಿ ವರದಿ ಒಪ್ಪಲು ಸಾಧ್ಯವಿಲ್ಲ, ಸಿಎಂ ರಾಜೀನಾಮೆ ನೀಡಲ್ಲ-ಧನಂಜಯ್ ಕುಮಾರ್
ಅಕ್ರಮ ಗಣಿ ವರದಿ ಸೋರಿಕೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ ಎಂದು ನವದೆಹಲಿಯ ರಾಜ್ಯ ಬಿಜೆಪಿ ವಿಶೇಷ ಪ್ರತಿನಿಧಿ ವಿ.ಧನಂಜಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ವರದಿ ಸೋರಿಕೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಗಣಿ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವರದಿ ಸೋರಿಕೆಯಿಂದ ಪಾವಿತ್ರ್ಯತೆ ಹಾಳಾಗಿದೆ. ನಿಜಕ್ಕೂ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನ ಸೋರಿಕೆಯಾಗಬಾರದು. ದುರಾದೃಷ್ಟ ವರದಿಯಲ್ಲಿನ ಅಂಶ ಈಗಾಗಲೇ ಬಹಿರಂಗವಾಗಿದೆ. ಇದೊಂದು ಗಂಭೀರ ಪ್ರಕರಣ. ಆ ನಿಟ್ಟಿನಲ್ಲಿ ಈ ವರದಿ ಹೇಗೆ ಬಹಿರಂಗವಾಯಿತು? ಯಾಕೆ ಬಹಿರಂಗವಾಯಿತು, ಯಾರು ಬಹಿರಂಗ ಮಾಡಿದ್ದಾರೆ ಎಂಬ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಅಕ್ರಮ ಗಣಿಗಾರಿಕೆ ವರದಿಯನ್ನು ಪ್ರಚಾರಕ್ಕಾಗಿಯೇ ಬಹಿರಂಗಪಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಗೂಬೆ ಕೂರಿಸಿದ ಧನಂಜಯ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ತಲೆದಂಡ ಖಚಿತ-ಸಿದ್ದರಾಮಯ್ಯ
ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಮೀಲಾಗಿರುವುದು ಸೋರಿಕೆಯಾಗಿರುವ ವರದಿಯಿಂದ ಬಹಿರಂಗವಾಗಿದೆ. ಆ ನಿಟ್ಟಿನಲ್ಲಿ ಈ ಬಾರಿ ಯಡಿಯೂರಪ್ಪ ತಲೆದಂಡ ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಅಕ್ರಮ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಷ್ಟೇ ಅಲ್ಲ ಗಣಿ ವರದಿ ಸೋರಿಕೆಗೆ ಕಾರಣರಾದವರ ಮೇಲೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.

ನಾನು ಯಾವ ತಪ್ಪೂ ಮಾಡಿಲ್ಲ-ಕರುಣಾಕರ ರೆಡ್ಡಿ
ನನ್ನ ಆತ್ಮಸಾಕ್ಷಿಯಾಗಿ ನಾನು ಯಾವುದೇ ತಪ್ಪು ಮಾಡಿಲ್ಲ...ಇದು ಕಂದಾಯ ಸಚಿವ ಕರುಣಾಕರ ರೆಡ್ಡಿ ಗಣಿ ವರದಿಯಲ್ಲಿ ಅವರ ಹೆಸರು ಉಲ್ಲೇಖವಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರ.

ಮೈಸೂರಿನಲ್ಲಿ ಮಾತನಾಡಿದ ಅವರು, ಓಬಳಾಪುರಂ ಗಣಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಲೋಕಾಯುಕ್ತ ವರದಿ ಸಲ್ಲಿಕೆಯಾದ ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಧನಂಜಯ್ ಕುಮಾರ್, ಬಿಜೆಪಿ, ಲೋಕಾಯುಕ್ತ, ಗಣಿ ವರದಿ ಸೋರಿಕೆ, ಕಾಂಗ್ರೆಸ್, ಸಂತೋಷ್ ಹೆಗ್ಡೆ