ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೊಗಳುವ ನಾಯಿಗಳಿಗೆ ಉತ್ತರ ನೀಡಲ್ಲ: ಕಾಂಗ್ರೆಸ್ಸಿಗರಿಗೆ ಹೆಗ್ಡೆ (Hegde | Dismisses | Congress criticism | Street dogs barking)
ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧನಂಜಯ್‌ ಕುಮಾರ್ ಮೂಲಕ ಪ್ರಭಾವ ಬೀರಲು ಯತ್ನಿಸಿದ್ದನ್ನು ಲೋಕಾಯುಕ್ತರು ತಡವಾಗಿ ಬಹಿರಂಗ ಪಡಿಸಿದ್ದೇಕೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ಮಾಡಿದ್ದ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಲೋಕಾಯುಕ್ತರು, ಬೊಗಳುವ ಬೀದಿ ನಾಯಿಗಳಿಗೆ ಉತ್ತರ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೆಗ್ಡೆ ಅವರು ಹೇಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿದ್ದರು ಎಂಬುದು ತಮಗೆ ಗೊತ್ತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌ ಅವರು ನೀಡಿದ್ದ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಹೆಗ್ಡೆ 'ಬೀದಿ ನಾಯಿಗಳು ಬೊಗಳಿದರೆ ಅದನ್ನು ನೋಡಿಕೊಳ್ಳುವುದು ಬಿಬಿಎಂಪಿ ಕೆಲಸ' ಎಂದಿದ್ದರು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ನಾನು ಖರೀದಿಸಿದ್ದೇನೆ ಎಂದು ಅವರು ಅಂದುಕೊಂಡಿದ್ದಾರೆಯೇ? ಇದೇ ರೀತಿ ಹುದ್ದೆಗೆ ನೇಮಕವಾಗುತ್ತದೆ ಎಂದು ಅವರು ತಿಳಿದುಕೊಂಡಿದ್ದಾರೆಯೇ? ಇವರ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೆಗ್ಡೆ ವ್ಯಂಗ್ಯವಾಗಿ ಹೇಳಿದರು. 'ನನ್ನನ್ನು ಯಾರು ಟೀಕಿಸಿಲ್ಲ ಹೇಳಿ? ಕಾಂಗ್ರೆಸ್‌ ಮುಖಂಡರಾದ ವೀರಪ್ಪ ಮೋಯ್ಲಿ, ದಿಗ್ವಿಜಯ್‌ ಸಿಂಗ್‌, ಜನಾರ್ದನ ಪೂಜಾರಿ ಅವರು ಟೀಕೆ ಮಾಡಿದ್ದಾರೆ. ಅವರು ಹೇಳಿದ್ದನ್ನು ಅವರೇ ನಂಬಿಕೊಳ್ಳಲಿ' ಎಂದು ಹೆಗ್ಡೆ ಹೇಳಿದ್ದಾರೆ.

ಸಂತೋಷ್‌ ಹೆಗ್ಡೆ ಅವರು ಲೋಕಪಾಲ ಕರಡು ರಚನೆ ಜಂಟಿ ಸಮಿತಿ ಸದಸ್ಯರಾಗಿ ನೇಮಕಗೊಂಡಾಗಿನಿಂದಲೂ ಕಾಂಗ್ರೆಸ್‌ ಮುಖಂಡರು ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹೆಗ್ಡೆ ಅವರು ಪ್ರತಿಪಕ್ಷ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ಗಡ್ಕರಿ ಆಪಾದಿಸಿದ್ದರು. ರಾಜ್ಯದ ಆಡಳಿತಾರೂಢ ಬಿಜೆಪಿ ನೇತೃತ್ವದ ಸರಕಾರವು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೆಗ್ಡೆ ಆಪಾದಿಸಿದ್ದರು.

ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಹಿರಿಯ ಮುಖಂಡ ವಿ.ಧನಂಜಯ ಕುಮಾರ್‌ ಅವರ ಮೂಲಕ ತಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು ಎಂದು ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್‌, ಹೆಗ್ಡೆಯವರು ಇಷ್ಟು ದಿನಗಳ ಕಾಲ ಈ ವಿಷಯ ಮುಚ್ಚಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಅಲ್ಲದೇ ಆ ನಿಟ್ಟಿನಲ್ಲಿ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

ತಾವು ಲೋಕಾಯುಕ್ತರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಆರೋಪವನ್ನು ಧನಂಜಯ ಕುಮಾರ್ ನಿರಾಕರಿಸಿದ್ದರು. ಈ ಕುರಿತು ಯಾವುದೇ ತನಿಖೆಗೆ ಸಿದ್ಧರಿರುವುದಾಗಿಯೂ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಹೆಗ್ಡೆ ತಾವು ಈ ಮೊದಲು ನೀಡಿದ್ದ ಹೇಳಿಕೆಗೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸಂತೋಷ್ ಹೆಗ್ಡೆ, ಲೋಕಾಯುಕ್ತ, ಕಾಂಗ್ರೆಸ್ ಹೇಳಿಕೆಗೆ ಖಂಡನೆ, ಬೊಗಳುವ ನಾಯಿಗಳಿಗೆ ಉತ್ತರಿಸಲ್ಲ