ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ವಿರುದ್ಧ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಮುಖ್ಯಮಂತ್ರಿ ಅಳಿಯ ಸೋಹನ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ತಿರಸ್ಕರಿಸುವ ಮೂಲಕ ಬಿಎಸ್‌ವೈ ವಿರುದ್ಧದ ಕೇಸ್ ವಿಚಾರಣೆ ಮುಂದುವರಿಸಲು ಲೋಕಾಯುಕ್ತಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಭೂಹಗರಣ ಕುರಿತು ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ಈ ಕುರಿತು ಹೆಚ್ಚಿನ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿಗಳ ಅಳಿಯ ಸೋಹನ್ ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಸೋಹನ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜೂ.20ಕ್ಕೆ ಪೂರ್ಣಗೊಳಿಸಿದ ನ್ಯಾ.ಕೆ.ಎನ್.ಕೇಶವನಾರಾಯಣ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು.
ಭೂಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ವಕೀಲ ಸಿರಾಜುದ್ದೀನ್ ಬಾಷಾ, ಮಾರ್ಚ್ 26ರಂದು ಕೆಳನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಇದರ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಅನುಮತಿ ದೊರಕಿತ್ತು.
ಆದರೆ ಸಿಎಂ ಹಾಗೂ ಕುಟುಂಬ ವರ್ಗದ ವಿರುದ್ಧ ಭೂಹಗರಣದ ತನಿಖೆಗೆ ಅವಕಾಶ ನೀಡಬಾರದು ಎಂದು ಸೋಹನ್ ಕುಮಾರ್ ಹೈಕೋರ್ಟ್ ಕಟಕಟೆ ಏರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿರಾಜುದ್ದೀನ್ ದಾಖಲಿಸಿದ ಮೊಕದ್ದಮೆ ಸರಿಯಾಗಿದೆ. ವಿಚಾರಣೆಗೆ ತಡೆ ಕೋರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ. ಅಲ್ಲದೇ ಆರು ವಾರದೊಳಗೆ ತನಿಖೆ ನಡೆಸುವಂತೆ ನ್ಯಾಯಾಧೀಶ ಕೇಶವ ನಾರಾಯಣರು ಸೂಚನೆ ನೀಡಿದರು.
ಸಿಎಂ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಸಿರಾಜುದ್ದೀನ್ ಬಾಷಾ 2010ರ ಡಿಸೆಂಬರ್ 26ರಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದರು.
ಐದು ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ಅಸ್ತು ಎಂದಿದೆ ಎಂದು ಸಿರಾಜಿನ್ ಬಾಷಾ ಪರ ವಕೀಲರಾದ ಸಿ.ಎಚ್.ಹನುಮಂತರಾಯ ಅವರು ಸುದ್ದಿಗಾರರ ಜತೆ ಮಾತನಾಡುತ್ತ ಈ ಸಂದರ್ಭದಲ್ಲಿ ತಿಳಿಸಿದರು.