ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಫೋನ್ ಕದ್ದಾಲಿಕೆ ಆಗಿಲ್ಲ-ಬಿಜೆಪಿ; ಸಿಎಂ ರಾಜೀನಾಮೆಗೆ 'ಕೈ' ಪಟ್ಟು (Lokayuktha | Santhosh hegde | Congress | BJP | Siddaramaiah | Illegal Mining)
ಫೋನ್ ಕದ್ದಾಲಿಕೆ ಆಗಿಲ್ಲ-ಬಿಜೆಪಿ; ಸಿಎಂ ರಾಜೀನಾಮೆಗೆ 'ಕೈ' ಪಟ್ಟು
ಬೆಂಗಳೂರು, ಶುಕ್ರವಾರ, 22 ಜುಲೈ 2011( 15:44 IST )
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿ ಸೋರಿಕೆ ಹಾಗೂ ಲೋಕಾಯುಕ್ತರ ಫೋನ್ ಕದ್ದಾಲಿಕೆ ಖಂಡಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಶನಿವಾರ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಆದರೆ ಫೋನ್ ಕದ್ದಾಲಿಕೆ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಗೃಹ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಅಕ್ರಮ ಗಣಿಗಾರಿಕೆಯಲ್ಲಿ ಯಾವುದೇ ಪಕ್ಷದ ಮುಖಂಡರು ಶಾಮೀಲಾಗಿರಲಿ ಅವರ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಸಭೆ ನಂತರ ಪರಮೇಶ್ವರ್ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.
ಲೋಕಾಯುಕ್ತರ ಫೋನ್ ಕದ್ದಾಲಿಕೆ ಕುರಿತು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೋ ಇಲ್ಲವೋ ಎಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ ಎಂದರು. ಅಲ್ಲದೇ ಅಕ್ರಮ ಗಣಿಗಾರಿಕೆಯಲ್ಲಿ ಸಿಎಂ ಭಾಗಿಯಾಗಿರುವುದು ಖಚಿತವಾಗಿದ್ದು, ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲೇಬೇಕು ಎಂದರು.
ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಅಕ್ರಮ ಗಣಿ ಕುರಿತ ಅಂತಿಮ ವರದಿ ಲೋಕಾಯುಕ್ತರು ಸಲ್ಲಿಸಿದ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಫೋನ್ ಕದ್ದಾಲಿಕೆ ಆಗಿಲ್ಲ-ಆರ್.ಅಶೋಕ್: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಫೋನ್ ಕದ್ದಾಲಿಕೆ ನಡೆದಿಲ್ಲ ಎಂದು ಗೃಹ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಗೃಹ ಇಲಾಖೆ ಮಾಹಿತಿ ನೀಡಿಲ್ಲ. ಕದ್ದಾಲಿಕೆ ಬಗ್ಗೆ ಯಾರೂ ದೂರು ಕೂಡ ನೀಡಿಲ್ಲ. ಹಾಗಾಗಿ ಫೋನ್ ಕದ್ದಾಲಿಕೆ ಆರೋಪ ಒಪ್ಪಲು ಸಾಧ್ಯವಿಲ್ಲ ಎಂದು ಈ ತಿಳಿಸಿದ್ದಾರೆ.
ಫೋನ್ ಕದ್ದಾಲಿಸಿದ್ದು ಸಿಎಂ-ಸಿದ್ದರಾಮಯ್ಯ ಆರೋಪ: ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರ ಫೋನ್ ಕದ್ದಾಲಿಸಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಎಂಬ ಸಂಶಯ ಬಲವಾಗಿ ಮೂಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗುಪ್ತಚರ ಇಲಾಖೆ ಅವರ ಹಿಡಿತದಲ್ಲಿಯೇ ಇದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿರ್ದೇಶನ ಇಲ್ಲದೆ ಪೋನ್ ಕದ್ದಾಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಮುಖ್ಯಮಂತ್ರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಸ್ಪಷ್ಟ ಎಂದರು.