ಗಣಿ ವರದಿಯಲ್ಲಿ ಕೃಷ್ಣ, ಧರ್ಮ ಸಿಂಗ್ ಹೆಸರಿಲ್ಲ: ಲೋಕಾಯುಕ್ತ
ಬೆಂಗಳೂರು, ಶನಿವಾರ, 23 ಜುಲೈ 2011( 12:32 IST )
PR
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ತಾನು ಸಲ್ಲಿಸುತ್ತಿರುವ ವರದಿಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರಾಗಲೀ, ಮತ್ತೊಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ಧರ್ಮ ಸಿಂಗ್ ಅವರನ್ನಾಗಲೀ ಹೆಸರಿಸಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಕೃಷ್ಣ ಅಥವಾ ಧರ್ಮ ಸಿಂಗ್ ಹೆಸರಿದೆ ಎಂದೆಲ್ಲಾ ನನ್ನ ವರದಿಯಲ್ಲಿ ಇಲ್ಲ. ಅದು ಇರುವುದು ಮಾಧ್ಯಮಗಳ ವರದಿಯಲ್ಲಿ ಮಾತ್ರ ಎಂದು ಹೆಗ್ಡೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.
ಈ ರೀತಿಯ ವರದಿಗಳನ್ನು ಹೇಗೆ ಮಾಡುತ್ತಾರೆ ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಹೆಗ್ಡೆ ಮಾಧ್ಯಮಗಳ ಅವಾಂತರದ ಬಗ್ಗೆ ಮತ್ತೊಮ್ಮೆ ಬೆಳಕು ಚೆಲ್ಲಿದರು.
2009ರ ಮಾರ್ಚ್ ತಿಂಗಳಿಂದೀಚೆಗಿನ ಅಕ್ರಮ ಗಣಿಗಾರಿಕೆ ಕುರಿತಾದ ಲೋಕಾಯುಕ್ತರ ವರದಿಯಲ್ಲಿ, ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಆರೋಪಗಳಿದ್ದು, ಮುಖ್ಯಮಂತ್ರಿ ಮತ್ತು ಅವರ ಸಂಪುಟದ ನಾಲ್ವರು ಸಹೋದ್ಯೋಗಿಗಳು ಸೇರಿಕೊಂಡು ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯದ ಬೊಕ್ಕಸಕ್ಕೆ 1800 ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈಗಾಗಲೇ ಸೋರಿಕೆಯಾಗಿರುವ ವರದಿಯನ್ನು ಸರಕಾರಕ್ಕೆ ಜುಲೈ 25ರಂದು ಸಲ್ಲಿಸುತ್ತೀರೇ ಎಂದು ಕೇಳಲಾದ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡಲು ನಿರಾಕರಿಸಿದರು. ರಾಜ್ಯಾದ್ಯಂತ ಭ್ರಷ್ಟರನ್ನು ಬೇಟೆಯಾಡಿ ಅಪಾರ ಸಂಪತ್ತು ವಶವಾಗಿರುವ ಕುರಿತು ವಿವರಿಸಲು ಪತ್ರಿಕಾಗೋಷ್ಠಿ ಕರೆದಿದ್ದ ಅವರು, ಸೂಕ್ತ ವೇದಿಕೆಯಲ್ಲಿ ಈ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದರು.
ರಾಜ್ಯಪಾಲರಿಗೂ ಗಣಿ ವರದಿಯ ಪ್ರತಿಯನ್ನು ಒಪ್ಪಿಸುತ್ತೀರಾ ಎಂದು ಕೇಳಿದಾಗ, ನಾನು ಆ ರೀತಿ ಮಾಡುವಂತಿಲ್ಲ. ಹಾಗೇನಾದರೂ ಕೇಳಿಕೊಂಡರೆ ಮಾತ್ರ ಆ ರೀತಿ ಮಾಡುವೆ ಎಂದು ಉತ್ತರಿಸಿದರು.
ಈಗಾಗಲೇ ರಾಜ್ಯಪಾಲರು ಹೇಳಿಕೆ ನೀಡಿ, ಯಡಿಯೂರಪ್ಪ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಲು ತಮ್ಮ ಉತ್ಸುಕತೆಯನ್ನು ಪ್ರಕಟಿಸಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎರಡು ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ವಿಫಲ ಶಿಫಾರಸು ಮಾಡಿರುವ ಅವರು ಹೇಳಿದ್ದಾರೆ.
ಬಿಹಾರದಿಂದ ಆಹ್ವಾನ ಬಂದಿಲ್ಲ ಇದೇ ವೇಳೆ, ಕರ್ನಾಟಕದಲ್ಲಿ ಲೋಕಾಯುಕ್ತ ಪದವಿಯ ಅವಧಿ ಇನ್ನು ಕೆಲವೇ ದಿನಗಳಲ್ಲಿ ಮುಗಿಯುತ್ತಿರುವುದರಿಂದ, ಬಿಹಾರದ ಲೋಕಾಯುಕ್ತರಾಗುವಂತೆ ತಮಗೆ ಅಲ್ಲಿನ ಜೆಡಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಹ್ವಾನಿಸಿದ್ದಾರೆ ಎಂಬ ಊಹಾಪೋಹಗಳ ಕುರಿತು ಕೇಳಿದಾಗ, ಅವರು ಸ್ಪಷ್ಟವಾಗಿ ಇಲ್ಲವೆಂದರು.
ಜನ ಲೋಕಪಾಲ ಸಮಿತಿಯ ಸದಸ್ಯರಲ್ಲೊಬ್ಬರಾದ ಶಾಂತಿ ಭೂಷಣ್ ಅವರು, ಬಿಹಾರದಲ್ಲಿ ಲೋಕಾಯುಕ್ತ ವರದಿ ತಯಾರಿಸಲು ನೆರವು ನೀಡುವಿರಾ ಎಂದು ಕೇಳಿದ್ದರು. ಅಷ್ಟೇ ಹೊರತು ಲೋಕಾಯುಕ್ತರಾಗಲು ಕರೆದಿಲ್ಲ ಎಂದು ಹೇಳಿದರು.