ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತ ಗಣಿ ವರದಿ ಸಿಎಂ 'ವಿರೋಧಿ ಬಣಕ್ಕೆ ಬ್ರಹ್ಮಾಸ್ತ್ರ' (B S Yeddyurappa | Lokayukta | mining scam | Rivals | Santhosh hegde | BJP)
ಲೋಕಾಯುಕ್ತ ಗಣಿ ವರದಿ ಸಿಎಂ 'ವಿರೋಧಿ ಬಣಕ್ಕೆ ಬ್ರಹ್ಮಾಸ್ತ್ರ'
ಬೆಂಗಳೂರು, ಶನಿವಾರ, 23 ಜುಲೈ 2011( 17:28 IST )
ಅಕ್ರಮ ಗಣಿಗಾರಿಕೆ ಕುರಿತ ಅಂತಿಮ ವರದಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ 'ವಿರೋಧಿ ಬಣ'ದಿಂದಲೇ ಸಮಸ್ಯೆ ಉಂಟಾಗುವ ಮೂಲಕ ರಾಜ್ಯರಾಜಕಾರಣದ ಪರಿಸ್ಥಿತಿ ಮತ್ತೊಮ್ಮೆ ಬಿಗಡಾಯಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತರ ಅಂತಿಮ ವರದಿಯ ಸೋರಿಕೆಯಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಮೀಲಾಗಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ವಿರೋಧಿ ಬಣ ತೆರೆಮರೆಯಲ್ಲಿ ಬಿರುಸಿನ ಕಾರ್ಯಚಟುವಟಿಕೆ ಆರಂಭಿಸಿದೆ. ಅಲ್ಲದೇ ಈ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಸುತ್ತಿರುವುದಾಗಿಯೂ ಮಾಧ್ಯಮದ ವರದಿಯೊಂದು ತಿಳಿಸಿದೆ. ಅಲ್ಲದೇ ಆರ್ಎಸ್ಎಸ್ ಮುಖಂಡರು ಕೂಡ ಶುಕ್ರವಾರ ಚರ್ಚೆ ನಡೆಸಿದ್ದಾರೆ.
ಇದೀಗ ಲೋಕಾಯುಕ್ತರು ಅಕ್ರಮ ಗಣಿಯ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿರುವುದನ್ನೇ ಕಾಯುತ್ತಿದ್ದು, ಅದು ಸಲ್ಲಿಕೆಯಾದ ಕೂಡಲೇ ಯಡಿಯೂರಪ್ಪ ವಿರೋಧಿ ಬಣ ಕೂಡಲೇ ದೆಹಲಿಗೆ ತೆರಳುವ ಸಿದ್ದತೆಯಲ್ಲಿದೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿಯ ನಾಯಕತ್ವವನ್ನು ಕೂಡಲೇ ಬದಲಾಯಿಸಿ, ಪಕ್ಷದ ವರ್ಚಸ್ಸನ್ನು ಕಾಪಾಡಬೇಕೆಂದು ಬೇಡಿಕೆ ಇಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಾಕಷ್ಟು ಬಾರಿ ಮುಖ್ಯಮಂತ್ರಿಗಳ ವಿರುದ್ಧ ಬಂಡುಕೋರರು ಬಂಡಾಯ ಸಾರಿದಾಗ, ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸಿ ಜಟಾಪಟಿಯನ್ನು ಶಮನಗೊಳಿಸಿತ್ತು. ಅಲ್ಲದೇ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ, ಪಕ್ಷದ ವರ್ಚಸ್ಸು ಕಾಪಾಡಿಕೊಳ್ಳುವಂತೆಯೂ ಹೈಕಮಾಂಡ್ ಸೂಚಿಸಿತ್ತು. ಆದರೆ ಈ ಬಾರಿ ಯಡಿಯೂರಪ್ಪ ವಿರುದ್ಧದ ಆರೋಪದಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ವಿರೋಧಿ ಬಣಕ್ಕೆ ಖಚಿತವಾಗಿದ್ದರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದೆ.
ಏತನ್ಮಧ್ಯೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯಾವುದೇ ನ್ಯಾಯಾಲಯ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದ್ದಲ್ಲಿ ತಾವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹೈಕಮಾಂಡ್ ಹೇಳುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ಲೋಕಾಯುಕ್ತರು ಗಣಿ ವರದಿಯಲ್ಲಿ ಯಡಿಯೂರಪ್ಪ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರ ಕಲೆಹಾಕಿ ಗಣಿ ಹಗರಣದಲ್ಲಿ ಆರೋಪಿ ಎಂಬುದಾಗಿಯೇ ಉಲ್ಲೇಖಿಸಿದೆ. ಹಾಗಾಗಿ ಹೈಕಮಾಂಡ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಸಿಎಂ ವಿರೋಧಿ ಬಣದ ತರ್ಕವಾಗಿದೆ.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿರುವ ಸಂಸತ್ ಅಧಿವೇಶನವನ್ನು ಪಕ್ಷ ಯಾವ ರೀತಿಯಲ್ಲಿ ಎದುರಿಸಲಿದೆ ಎಂಬುದಾಗಿಯೂ ಪ್ರಶ್ನಿಸಿದೆ.
ಹೌದು...ಪಕ್ಷದೊಳಗೆ ಕಸರತ್ತು ನಡೆಯುತ್ತಿರುವುದು ಸತ್ಯ. ಆದರೆ ಲೋಕಾಯುಕ್ತರು ಅಕ್ರಮ ಗಣಿ ಕುರಿತು ವರದಿಯನ್ನು ಸಲ್ಲಿಸಿದ ನಂತರ ಅಸಮಾಧಾನ ಹೋಗಲಾಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.