ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬ್ಲ್ಯಾಕ್ ಮನಿ-ಅಣ್ಣಾ, ಬಾಬಾಗೆ ಮಾತಾಡೋ ಹಕ್ಕಿಲ್ಲ: ಗವರ್ನರ್ (Governor | Hans Raj Bhardwaj | black money | Anna Hazare | Baba Ramdev)
ಬ್ಲ್ಯಾಕ್ ಮನಿ-ಅಣ್ಣಾ, ಬಾಬಾಗೆ ಮಾತಾಡೋ ಹಕ್ಕಿಲ್ಲ: ಗವರ್ನರ್
ಬೆಂಗಳೂರು, ಸೋಮವಾರ, 25 ಜುಲೈ 2011( 13:47 IST )
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಯೋಗ ಗುರು ಬಾಬಾ ರಾಮದೇವ್‌ಗೆ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾತನಾಡುವ ಯಾವುದೇ ಅಧಿಕಾರ ಇಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿರುಗೇಟು ನೀಡಿದ್ದಾರೆ.
ಭಾರತದ ಆದಾಯ ತೆರಿಗೆ ಇಲಾಖೆಯ 150 ವರ್ಷಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಣ್ಣಾ ಹಜಾರೆ ಹಾಗೂ ಬಾಬಾ ರಾಮ್ ದೇವ್ ಕಪ್ಪು ಹಣದ ಬಗ್ಗೆ ಮಾತನಾಡಲು ಅವರೇನು ತೆರಿಗೆ ತಜ್ಞರೇ ಎಂದು ಪ್ರಶ್ನಿಸಿರುವ ಗವರ್ನರ್, ಹಾಗಾಗಿ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ವಾಪಸ್ ತರಬೇಕು ಎಂಬ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದರು.
ಕಾನೂನಿನಿಂದ ತಪ್ಪಿಸಿಕೊಳ್ಳಲು ಹಲವು ದಾರಿಗಳಿವೆ, ಹಾಗಾಗಿ ಜನರು ಹಣವನ್ನು ವಿದೇಶಿ ಬ್ಯಾಂಕ್‌ಗಳಲ್ಲಿಟ್ಟಿದ್ದಾರೆ. ಆ ಹಣ ಕೂಡ ಸುರಕ್ಷಿತವಲ್ಲ ಎಂದ ಭಾರದ್ವಾಜ್, ಈ ಬಗ್ಗೆ ನಾವು ಕಠಿಣ ಕಾಯ್ದೆಯನ್ನು ಜಾರಿಗೆ ತಂದಲ್ಲಿ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಬಹುದು ಎಂದು ಅಭಿಪ್ರಾಯಪಟ್ಟರು.
ಅಲ್ಲದೇ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ಅಂತಿಮ ವರದಿ ಮತ್ತು ಫೋನ್ ಕದ್ದಾಲಿಕೆ ಕುರಿತಂತೆ ಪ್ರಶ್ನಿಸಿದಾಗ, ಈ ಬಗ್ಗೆ ಲೋಕಾಯುಕ್ತರು ವರದಿಯನ್ನು ನನಗೆ ಸಲ್ಲಿಸಿದಲ್ಲಿ, ನಾನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಪುನರುಚ್ಚರಿಸಿದರು.
ರಾಜ್ಯಪಾಲರದ್ದು ಸಂವಿಧಾನಬದ್ಧ ಹುದ್ದೆ. ಆ ನಿಟ್ಟಿನಲ್ಲಿ ಜನರು ನೇರವಾಗಿ ನನಗೆ ದೂರು ಸಲ್ಲಿಸದೇ ನಾನು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಲೋಕಾಯುಕ್ತರು ರಾಜ್ಯಪಾಲರನ್ನು ಸಕ್ಷಮ ಪ್ರಾಧಿಕಾರಿಯಾಗಿ ಪರಿಗಣಿಸಿ ವರದಿಯನ್ನು ನೀಡಿದರೆ, ನಾನು ಏನು ಕ್ರಮಕೈಗೊಳ್ಳಬೇಕೋ ಆ ರೀತಿ ನಡೆದುಕೊಳ್ಳುವುದಾಗಿ ಹೇಳಿದರು.