ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಕ್ರಿಮಿನಲ್ ಕೇಸ್-ಸರ್ಕಾರವೇ ಪ್ರತಿವಾದಿ: ಹೈಕೋರ್ಟ್ (BJP | Yeddyurappa | High court | Criminal case | Governor | Land scam)
ಸಿಎಂ ಕ್ರಿಮಿನಲ್ ಕೇಸ್-ಸರ್ಕಾರವೇ ಪ್ರತಿವಾದಿ: ಹೈಕೋರ್ಟ್
ಬೆಂಗಳೂರು, ಮಂಗಳವಾರ, 26 ಜುಲೈ 2011( 11:39 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಅನುಮತಿ ಪ್ರಶ್ನಿಸಿರುವ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ಹೈಕೋರ್ಟ್ ಆದೇಶಿಸಿದೆ.
ಯಡಿಯೂರಪ್ಪ ಅವರ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ನ್ಯಾ.ಎ.ಎಸ್.ಬೋಪಣ್ಣ ವರ್ಗಾಯಿಸಿದ ಹಿನ್ನೆಲೆಯಲ್ಲಿ, ಸೋಮವಾರ ಮೊದಲ ಬಾರಿಗೆ ವಿಭಾಗೀಯ ಪೀಠ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು. ಸಂವಿಧಾನದ 361ನೇ ಕಲಂ ಪ್ರಕಾರ ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿಸುವುದು ಅಸಾಧ್ಯ. ಹಾಗಾಗಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ಒಂದು ವಾರದಲ್ಲಿ ತಿದ್ದುಪಡಿ ಅರ್ಜಿ ಸಲ್ಲಿಸಲು ಹೈಕೋರ್ಟ್ ವಿಭಾಗೀಯ ಪೀಠ ಅವಕಾಶ ನೀಡಿದೆ.
ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಸೋಹನ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಿಎಂ ಕಾನೂನು ಹೋರಾಟಕ್ಕಿರುವ ಅಂತಿಮ ಉಸಿರಿದು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಜಿತ್ ಗುಂಜಾಳ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿ ಅ.16ಕ್ಕೆ ವಿಚಾರಣೆ ಮುಂದೂಡಿದೆ.
ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ ಪ್ರಧಾನ ಕಾರ್ಯದರ್ಶಿ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಮತ್ತೊಂದೆಡೆ ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿಸಲು ಸಾಧ್ಯವಿಲ್ಲ. ಒಂದೊಮ್ಮೆ ರಾಜ್ಯಪಾಲರೇ ಪ್ರಮಾಣಪತ್ರ ಸಲ್ಲಿಸಿದರೆ ಸ್ವೀಕರಿಸಬಹುದು, ಆದರೆ ಸೂಚನೆ ನೀಡುವುದು ಅಸಾಧ್ಯ ಎಂದು ಭಾಷಾ ಪರ ನ್ಯಾಯವಾದಿಗಳು ವಾದಿಸಿದರು.
ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಂಡ ಅರ್ಜಿದಾರರ ಪರ ನ್ಯಾಯವಾದಿಗಳು, ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿಸಿರುವುದಕ್ಕೆ ಸಮರ್ಥನೆ ನೀಡಿದರು. ಅರ್ಜಿ ಮಾನ್ಯತೆ ಹಾಗೂ ಮಧ್ಯಂತರ ತಡೆಯಾಜ್ಞೆ ಕುರಿತಂತೆ ಹೈಕೋರ್ಟ್ ಯಾವುದೇ ಆದೇಶ ನೀಡಿಲ್ಲ.
ಸ್ವಜನ ಪಕ್ಷಪಾತ, ಭೂಹಗರಣದ ಆರೋಪ ಎದುರಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಅನುಮತಿ ಕೋರಿ ವಕೀಲ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಅವರು ಮನವಿ ಸಲ್ಲಿಸಿದ್ದರು. ಅದಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಲೋಕಾಯುಕ್ತರ ವಿಶೇಷ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.