ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲರ ಚಿತ್ತ ಹೈಕಮಾಂಡ್‌ನತ್ತ : ಉತ್ತರಾಧಿಕಾರಿಗಾಗಿ ಹುಡುಕಾಟ? (BJP | Yeddyurappa | Illegal Mining Report | Lokayukta | High commond)
ಎಲ್ಲರ ಚಿತ್ತ ಹೈಕಮಾಂಡ್‌ನತ್ತ : ಉತ್ತರಾಧಿಕಾರಿಗಾಗಿ ಹುಡುಕಾಟ?
ನವದೆಹಲಿ, ಮಂಗಳವಾರ, 26 ಜುಲೈ 2011( 20:27 IST )
PR
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ಅಂತಿಮ ವರದಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಭವಿಷ್ಯ ಪಕ್ಷದ ಹೈಕಮಾಂಡ್ ಬುಧವಾರ ಬಹುತೇಕವಾಗಿ ನಿರ್ಧರಿಸಲಿದೆ. ಅಲ್ಲದೇ ಯಡಿಯೂರಪ್ಪ ಉತ್ತರಾಧಿಕಾರಿಗಾಗಿ ಹೈಕಮಾಂಡ್ ಬಿರುಸಿನ ಹುಡುಕಾಟ ನಡೆಸುತ್ತಿದೆ ಮಾಧ್ಯಮದ ವರದಿಯೊಂದು ತಿಳಿಸಿದೆ.
ಲೋಕಾಯುಕ್ತರು ಸಲ್ಲಿಸಲಿರುವ ಅಕ್ರಮ ಗಣಿ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಸಾಬೀತಾಗಿದ್ದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಖಚಿತ ಎಂದು ಬಿಜೆಪಿ ಮೂಲವೊಂದು ಸಿಎನ್ಎನ್-ಐಬಿಎನ್‌ಗೆ ಹೇಳಿದೆ.
ಒಂದು ವೇಳೆ ಯಡಿಯೂರಪ್ಪ ಪರ್ಯಾಯ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲಿ, ವಿಧಾನಸಭೆಯನ್ನು ವಿಸರ್ಜಿಸಿಸುವುದು ಹಾಗೂ ಮಧ್ಯಂತರ ಚುನಾವಣೆಗೆ ತೆರಳುವ ಸಾಧ್ಯತೆ ದಟ್ಟವಾಗಿರುವುದಾಗಿ ತಿಳಿಸಿದೆ.
ಆದರೆ ವಿಧಾನಸಭೆ ವಿಸರ್ಜಿಸಿ, ಮಧ್ಯಂತರ ಚುನಾವಣೆಗೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಒಪ್ಪುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ. ಒಟ್ಟಿನಲ್ಲಿ ಲೋಕಾಯುಕ್ತರು ಬುಧವಾರ ಸಲ್ಲಿಸಲಿರುವ ಅಕ್ರಮ ಗಣಿ ವರದಿ ರಾಜ್ಯರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಅಲ್ಲೋಲಕಲ್ಲೋಲ ಸೃಷ್ಟಿಸಲಿದೆ.
ಹೈಕಮಾಂಡ್‌ನತ್ತ ಎಲ್ಲರ ಚಿತ್ತ: ಅಕ್ರಮ ಗಣಿಗಾರಿಕೆ ಕುರಿತ ಅಂತಿಮ ವರದಿಯನ್ನು ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಜೆಪಿ ಹೈಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. ಆ ನಿಟ್ಟಿನಲ್ಲಿ ಬುಧವಾರ ಸಂಜೆ ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿರುವುದರಿಂದ ಇದೀಗ ಬಿಜೆಪಿ ವರಿಷ್ಠರು ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ರಮ ಗಣಿ ವರದಿ ಸೋರಿಕೆಯಾಗಿದ್ದು, ಅದರಲ್ಲಿ ಯಡಿಯೂರಪ್ಪ ಹೆಸರು ಉಲ್ಲೇಖವಾಗಿರುವುದು ಸಾಕಷ್ಟು ಆರೋಪ-ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆದರೆ ತುರ್ತು ಕಾರ್ಯಕ್ರಮದ ನೆಪವೊಡ್ಡಿ ದೆಹಲಿ ಭೇಟಿ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆಯನ್ನು ಬುಧವಾರಕ್ಕೆ ಮುಂದೂಡಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವುದಾಗಿ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೇ ಅಕ್ರಮ ಗಣಿಗಾರಿಕೆ ವರದಿಯಲ್ಲಿ ರೆಡ್ಡಿ ಸಹೋದರರ ಹೆಸರು ಕೂಡ ಉಲ್ಲೇಖವಾಗಿರುವುದರಿಂದ ಈ ಬಾರಿ ಸುಷ್ಮಾ ಸ್ವರಾಜ್ ಕೂಡ ಹೆಚ್ಚಿನ ಒತ್ತಡ ಹೇರಲು ಹೋಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರದ ಮೇಲೆ ಯಡಿಯೂರಪ್ಪ ಭವಿಷ್ಯ ನಿರ್ಧಾರವಾಗಲಿದೆ.