ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜೀನಾಮೆ ಕೇಳಿದ್ದು ಗೌಡ್ರು, ಹೈಕಮಾಂಡ್ ಅಲ್ಲ: ಯಡಿಯೂರಪ್ಪ (BJP, Yeddyurappa | Deve gowda | kumaraswamy | Illegal mining | Lokayukta, High commond)
ರಾಜೀನಾಮೆ ಕೇಳಿದ್ದು ಗೌಡ್ರು, ಹೈಕಮಾಂಡ್ ಅಲ್ಲ: ಯಡಿಯೂರಪ್ಪ
ಬೆಂಗಳೂರು, ಬುಧವಾರ, 27 ಜುಲೈ 2011( 11:23 IST )
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಗೆ ಸಂಬಂಧಿಸಿದಂತೆ ರಾಜೀನಾಮೆ ಕೊಡಿ ಎಂದು ಹೈಕಮಾಂಡ್ ಸೂಚಿಸಿಲ್ಲ. ರಾಜೀನಾಮೆ ಕೊಡಿ ಎಂದು ಕೇಳುತ್ತಿರುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ. ಹಾಗಾಗಿ ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಗರಕ್ಕೆ ವಾಪಸ್ ಆದ ನಂತರ ಬುಧವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ರಾಜೀನಾಮೆ, ವಿಧಾನಸಭೆ ವಿಸರ್ಜನೆ ಬಗ್ಗೆ ಮಾಧ್ಯಮಗಳು ಏನೇನೋ ಬರೆಯುತ್ತಿವೆ. ಆದರೆ ರಾಜೀನಾಮೆ ಕೊಡಿ ಎಂದು ಹೈಕಮಾಂಡ್ ಈವರೆಗೂ ಕೇಳಿಲ್ಲ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ವಿಧಾನಸಭೆ ವಿಸರ್ಜಿಸುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಎರಡು ವರ್ಷಗಳ ನಂತರವೇ ಚುನಾವಣೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾನು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪುನರುಚ್ಚರಿಸಿದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮೇಲೆ ನನಗೆ ಮತ್ತಷ್ಟು ವಿಶ್ವಾಸ ಹೆಚ್ಚಾಗಿದೆ. ಹೈಕಮಾಂಡ್ ನನ್ನ ಬೆನ್ನಿಗಿದೆ. ಪ್ರತಿಪಕ್ಷಗಳ ಆರೋಪಕ್ಕೆ ಧೈರ್ಯಗುಂದುವ ಪ್ರಶ್ನೆಯೇ ಇಲ್ಲ ಎಂದರು.