ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೊನೆಗೂ ಗಣಿ ವರದಿಯ ಅಧಿಕೃತ ಸ್ಫೋಟ! ಏನಿದೆ ಅದರಲ್ಲಿ?
(Karnataka Lokayukta Report | Illegal Mining | Yeddyurappa | Santosh Hegde)
ಕೊನೆಗೂ ಗಣಿ ವರದಿಯ ಅಧಿಕೃತ ಸ್ಫೋಟ! ಏನಿದೆ ಅದರಲ್ಲಿ?
ಬೆಂಗಳೂರು, ಬುಧವಾರ, 27 ಜುಲೈ 2011( 16:07 IST )
PTI
ಕೊನೆಗೂ ಗಣಿ ಸ್ಫೋಟವಾಗಿದೆ. ಬಳ್ಳಾರಿಯ ಚಿನ್ನದ ಮಣ್ಣಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ಯಾರೆಲ್ಲಾ ಹಾನಿ ಮಾಡಿದ್ದಾರೆ, ಯಾರು ಹಣ ಮಾಡಿಕೊಂಡಿದ್ದಾರೆ ಎಂಬ ವಿವರಗಳಿರುವ ಸುದೀರ್ಘ ಸುಮಾರು 9000 ಪುಟಗಳ ವರದಿಯನ್ನು ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರಕಾರಕ್ಕೆ ಬುಧವಾರ ಮಧ್ಯಾಹ್ನ ಸಲ್ಲಿಸಿದ್ದು, ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಅನಿಲ್ ಲಾಡ್ ಅವರೆಲ್ಲರೂ ಭಾಗಿಯಾಗಿರುವ ಕುರಿತು ಮಾಹಿತಿ ಇದೆ.
ಲೋಕಾಯುಕ್ತ ರಿಜಿಸ್ಟ್ರಾರ್ ಕುಂಞಿ ನಾಯರ್‌ಮೂಲೆ ಅವರು ರಾಜ್ಯ ಸರಕಾರದ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಲೋಕಾಯುಕ್ತರ ವರದಿಯಲ್ಲಿ ಮಂಗಳವಾರ ಅಪರಾಹ್ನ 4ಕ್ಕೆ ಒಪ್ಪಿಸಿದರು. ಲೋಕಾಯುಕ್ತರ ವರದಿ ಬಗ್ಗೆ ರಾಜ್ಯಾದ್ಯಂತ ಕುತೂಹಲ ಗರಿಗೆದರಿದೆ. ಎಲ್ಲೆಲ್ಲಿ ನೋಡಿದರೂ ಊಹಾಪೋಹಗದ ವರದಿಗಳೇ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಗಣಿ ವರದಿಯ ಒಂದು ಪ್ರತಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೂ ರಿಜಿಸ್ಟ್ರಾರ್ ಸಲ್ಲಿಸಿದ್ದಾರೆ.
ಆದರೆ, ಈಗಾಗಲೇ ವರದಿ ಸೋರಿಕೆಯಾಗಿದ್ದು, ಈ ಸಾವಿರಾರು ಪುಟಗಳ ಒಳಗೇನಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಿದ್ದರೆ ಹಲವು ದಿನಗಳೇ ಬೇಕಾದೀತು. ಆದರೆ, ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರ ತಡೆಗೆ ಲೋಕಾಯುಕ್ತರು ಏನೆಲ್ಲಾ ಶಿಫಾರಸು ಮಾಡಿದ್ದಾರೆ ಎಂಬುದೇ ಈ ವರದಿಯಲ್ಲಿ ಮಹತ್ವದ ಅಂಶವಾಗಿಬಿಡುತ್ತದೆ.
ಮೂಲಗಳ ಪ್ರಕಾರ, ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಶಿಫಾರಸು ಮಾಡಿದ್ದಾರೆ. ಇದಕ್ಕೆ ಕಾರಣವೆಂದರೆ, ಬಳ್ಳಾರಿಯ ಗಣಿ ಕಂಪನಿಗಳು ಯಡಿಯೂರಪ್ಪ ಅವರ ಕುಟುಂಬ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿವೆ ಎಂಬುದು.
ರೆಡ್ಡಿಗಳೇ ಹಣ ಕಕ್ಕಬೇಕು... ಇದೇ ವೇಳೆ, ಬಳ್ಳಾರಿಯ ಗಣಿ ಧಣಿಗಳೆಂದೇ ಖ್ಯಾತರಾಗಿರುವ ರಾಜ್ಯದ ಸಚಿವ ಸಂಪುಟದಲ್ಲಿಯೂ ಸ್ಥಾನ ಪಡೆದಿರುವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಅವರ ಮೇಲೂ ಆರೋಪಗಳಿದ್ದು, ಅವರಿಂದಲೇ ರಾಜ್ಯದ ಬೊಕ್ಕಸಕ್ಕಾದ ನಷ್ಟವನ್ನು ತುಂಬಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ವರದಿಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೆಸ್ ಸಂಸದ ಅನಿಲ್ ಲಾಡ್ ಹೆಸರು ಕೂಡ ಇದೆ. ಗಣಿ ಕಂಪನಿಗೆ ಅಕ್ರಮ ಗಣಿಗಾರಿಕೆಗೆ ಪರವಾನಗಿ ಕೊಟ್ಟ ಆರೋಪ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮೇಲಿದೆ. ಆದರೆ ಅವರ ವಿರುದ್ಧ ಕ್ರಮಕ್ಕೆ ಲೋಕಾಯುಕ್ತರು ಶಿಫಾರಸು ಮಾಡಿಲ್ಲ ಎನ್ನಲಾಗುತ್ತಿದೆ. ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ, ಗಣಿ ಧಣಿ ಅನಿಲ್ ಲಾಡ್ ಹೆಸರು ಕೂಡ ಇರುವುದರಿಂದ ಕಾಂಗ್ರೆಸ್ ಪಕ್ಷವೂ ಇಕ್ಕಟ್ಟಿನಲ್ಲಿ ಸಿಲುಕಿದೆ.
ಈಗಾಗಲೇ ಎಲ್ಲ ಪಕ್ಷದವರೂ ಪರಸ್ಪರರ ರಾಜೀನಾಮೆಗೆ ಆಗ್ರಹಿಸತೊಡಗುವಂತಾಗಿರುವುದು ನಮ್ಮ ನಾಯಕರ ಧನದಾಹ ಮತ್ತು ಕೆಟ್ಟ ರಾಜಕೀಯಕ್ಕೆ ಸಾಕ್ಷಿಯಾಗಿದೆ.