ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ :ರಾಜ್ಯದ ಬೊಕ್ಕಸಕ್ಕೆ 16 ಸಾವಿರ ಕೋಟಿ ನಷ್ಟ! (BJP | Illegal Mining Report | Lokayukta | Yeddyurappa | Santhosh hegde | Kumaraswamy)
ಅಕ್ರಮ ಗಣಿ :ರಾಜ್ಯದ ಬೊಕ್ಕಸಕ್ಕೆ 16 ಸಾವಿರ ಕೋಟಿ ನಷ್ಟ!
ಬೆಂಗಳೂರು, ಬುಧವಾರ, 27 ಜುಲೈ 2011( 17:48 IST )
PR
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಚೇನಹಳ್ಳಿಯಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದು, ಆ ಜಮೀನು ಖರೀದಿಸಲು ಆರ್ಥಿಕವಾಗಿ ಸದೃಢವಲ್ಲದ ಕಂಪನಿಯೊಂದು 20 ಕೋಟಿ ರೂಪಾಯಿ ಹಣವನ್ನು ಚೆಕ್ ಮೂಲಕ ದೇಣಿಗೆ ಮೂಲಕ ನೀಡಿರುವುದಾಗಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಅಂತಿಮ ವರದಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಸಲ್ಲಿಸಿದ ನಂತರ ಲೋಕಾಯುಕ್ತ ಕಚೇರಿಯಲ್ಲಿ ನ್ಯಾ.ಸಂತೋಷ್ ಹೆಗ್ಡೆ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಒಂದು ಕೋಟಿ ರೂಪಾಯಿ ಮೌಲ್ಯದ ಭೂಮಿಗೆ 20 ಕೋಟಿ ರೂಪಾಯಿಯನ್ನು ಸಂದಾಯ ಮಾಡಲಾಗಿದೆ. ಆರ್ಥಿಕವಾಗಿ ಸದೃಢವಲ್ಲದ ಕಂಪನಿಯೊಂದು ಬೇರೆಯವರಿಂದ ಸಾಲ ಪಡೆದು ಈ ಹಣ ಸಂದಾಯ ಮಾಡಿದೆ. ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮಾತ್ರ ಅಧಿಕಾರವಿದೆ. ಹಾಗಾಗಿ ಗಣಿ ವರದಿಯ ಒಂದು ಪ್ರತಿಯನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದೇವೆ. ಕ್ರಮ ಕೈಗೊಳ್ಳುವುದು ಅವರಿಗೆ ಬಿಟ್ಟ ವಿಚಾರ ಎಂದರು.
PR
ಸರ್ಕಾರದ ಬೊಕ್ಕಸಕ್ಕೆ 16,085 ಕೋಟಿ ನಷ್ಟ: 2006ರಿಂದ 2010ರವರೆಗೆ ನಡೆದ ಅಕ್ರಮಗಳಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 16,085 ಕೋಟಿ ರೂಪಾಯಿ ನಷ್ಟವಾಗಿದೆ ಎಂದರು. ಅಲ್ಲದೇ ಅಕ್ರಮ ಗಣಿ ವರದಿಯಲ್ಲಿ ರೆಡ್ಡಿ ಸಹೋದರರು, ಸಚಿವ ಸೋಮಣ್ಣ, ಸಂಸದ ಅನಿಲ್ ಲಾಡ್, ಎರಡು ಗಣಿ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರನ್ನೂ ಸೇರಿಸಲಾಗಿದೆ ಎಂದು ಹೆಗ್ಡೆ ವಿವರಿಸಿದರು. ಅಲ್ಲದೇ ಕೂಡ್ಲಿಗೆ ಶಾಸಕ ನಾಗೇಂದ್ರ ಅವರ ಹೆಸರು ಕೂಡ ಇರುವುದಾಗಿ ಹೇಳಿದರು. ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಅಕ್ರಮ ಮಾಡಿದವರೇ ಭರಿಸಬೇಕು ಎಂದು ಶಿಫಾರಸು ಮಾಡಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲ 787 ಅಧಿಕಾರಿಗಳು, ಹಲವು ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ.
25,228 ಪುಟಗಳ ಬೃಹತ್ ವರದಿ: ರಾಜ್ಯದ ಅಕ್ರಮ ಗಣಿ ಹಗರಣದ ಕುರಿತು 2006ರಲ್ಲಿ ರಾಜ್ಯ ಸರ್ಕಾರ ಲೋಕಾಯುಕ್ತ ತನಿಖೆಗೆ ಒಪ್ಪಿಸಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ 2008 ಡಿಸೆಂಬರ್ 18ರಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಒಟ್ಟಾರೆ ಅಂತಿಮ ವರದಿಯಲ್ಲಿ ವಿದೇಶಕ್ಕೆ ರಫ್ತು ಮಾಡಿ ಅದಿರು ಸಾಗಾಣೆ, ಯಾರು ಮಾಡಿದ್ದಾರೆ, ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂಬ ವಿವರ ಇದೆ. ಸುಮಾರು 25,228 ಪುಟಗಳ ಬೃಹತ್ ವರದಿಯನ್ನು ನಾವು ತುಂಬಾ ಕಷ್ಟಪಟ್ಟು ದಾಖಲೆ ಸಹಿತ ಸಿದ್ದಪಡಿಸಿದ್ದೇವೆ. ಇದಕ್ಕಾಗಿ ನಾಲ್ಕು ಲಕ್ಷ ಕಡತಗಳನ್ನು ಪರಿಶೀಲಿಸಿದ್ದೇವೆ. ಸುಮಾರು 50 ಲಕ್ಷ ಎಂಟ್ರೀಸ್‌ಗಳನ್ನು ಪರಿಶೀಲಿಸಿರುವುದಾಗಿಯೂ ತಿಳಿಸಿದರು.
ನಾವು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ 55 ಕಂಪನಿಗಳ ಮೇಲೆ ಕ್ರಿಮಿನಲ್ ಕೇಸ್ ಹಾಕಿತ್ತು ಅಷ್ಟೇ. ಮಧ್ಯಂತರ ವರದಿಯಲ್ಲಿ ಬಳ್ಳಾರಿ, ಸಂಡೂರು, ತುಮಕೂರು ಜಿಲ್ಲೆ ಜನರಿಗೆ ಆಗುವ ಹಾನಿ, ಓವರ್ ಲೋಡ್‌ನಿಂದಾಗಿ ರಸ್ತೆ ಹಾಗೂ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ವಿವರಿಸಿ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಮಾಹಿತಿ ಬಹಿರಂಗ ಮಾಡಲ್ಲ, ಆರ್‌ಟಿಐ ಮೂಲಕ ಪಡೆದುಕೊಳ್ಳಿ: ಅಕ್ರಮ ಗಣಿಗಾರಿಕೆ ಕುರಿತ ಅಂತಿಮ ವರದಿ ಕುರಿತು ನಾನು ಯಾವುದೇ ಮಾಹಿತಿ ಬಹಿರಂಗಪಡಿಸಲ್ಲ. ನಿಮಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ಆರ್‌ಟಿಐ ಮೂಲಕ ಪಡೆದುಕೊಳ್ಳಿ ಎಂದು ಮಾಧ್ಯಮದವರಿಗೆ ಹೇಳಿದರು.