ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ: ಕಣಕ್ಕಿಳಿದ ರಾಜ್ಯಪಾಲ, ಮುಖ್ಯ ಕಾರ್ಯದರ್ಶಿಗೆ ಬುಲಾವ್ (Governor | Hans Raj Bhardwaj | Illigal mining report | Lokayukta)
ಗಣಿ: ಕಣಕ್ಕಿಳಿದ ರಾಜ್ಯಪಾಲ, ಮುಖ್ಯ ಕಾರ್ಯದರ್ಶಿಗೆ ಬುಲಾವ್
ಬೆಂಗಳೂರು, ಬುಧವಾರ, 27 ಜುಲೈ 2011( 18:38 IST )
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸರಕಾರದೊಂದಿಗೆ ರಾಜ್ಯಪಾಲರಿಗೂ ವರದಿ ಸಲ್ಲಿಸಿ ಕ್ರಮಕ್ಕೆ ಪ್ರೇರಣೆ ಒದಗಿಸಿರುವಂತೆಯೇ, ತುರ್ತು ಕಾರ್ಯಾಚರಣೆಗಿಳಿದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ತಮ್ಮ ಮುಖ್ಯಮಂತ್ರಿ ವಿರುದ್ಧದ ಸಮರವನ್ನು ಪುನಃ ತೀವ್ರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್.ವಿ.ರಂಗನಾಥ್ ಅವರಿಗೆ ತಕ್ಷಣವೇ ರಾಜ ಭವನಕ್ಕೆ ಬರುವಂತೆ ತಿಳಿಸಿದ್ದಾರೆ.
ರಾಜ್ಯಪಾಲರು ಮೈಸೂರು ಪ್ರವಾಸದಲ್ಲಿದ್ದು, ಲೋಕಾಯುಕ್ತರ ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದು, ಸಂಜೆ ಏಳು ಗಂಟೆಯ ವೇಳೆಗೆ ತಮ್ಮನ್ನು ಭೇಟಿ ಮಾಡಲಿರುವ ಮುಖ್ಯ ಕಾರ್ಯದರ್ಶಿಯನ್ನು ವರದಿಯಲ್ಲಿ ಮುಖ್ಯಮಂತ್ರಿ ಮತ್ತು ಕೆಲವರು ಹೆಸರು ಪ್ರಸ್ತಾಪವಾಗಿರುವ ಕುರಿತು ವಿವರಣೆ ಕೋರಲಿದ್ದಾರೆ ಎನ್ನಲಾಗಿದೆ.
ವರದಿ ಪರಿಶೀಲಿಸಿದ ನಂತರ ಕ್ರಮ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿ ಕುರಿತು ವರದಿ ತಯಾರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಗ್ಡೆ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರು ನೀಡುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.
ಲೋಕಾಯುಕ್ತರಿಂದ ನೇರವಾಗಿ ವರದಿಯನ್ನು ಕೋರುವುದಿಲ್ಲ, ಸರಕಾರದ ಮೂಲಕ ಬಂದ ವರದಿಯನ್ನು ಪರಿಶೀಲಿಸಿವುದಾಗಿ ರಾಜ್ಯಪಾಲರು ಈ ಹಿಂದೆ ಹೇಳಿದ್ದರು. ಇಂದು ಸರಕಾರಕ್ಕೆ ಲೋಕಾಯುಕ್ತ ರಿಜಿಸ್ಟ್ರಾರ್ ನಾಯನಾರ್ ಮೂಲೆ ಅವರು ವರದಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ವರದಿಯ ಪ್ರತಿಯನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದರು.
ಕಾನೂನು ತಜ್ಞರೂ ಆಗಿರುವ ರಾಜ್ಯಪಾಲರು ವರದಿಯನ್ನು ಪರಿಶೀಲಿಸಿದ ನಂತರ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುವ ಸಾಧ್ಯತೆಗಳಿವೆ.
ಬಿಜೆಪಿ ಬಂಡಾಯ ಶಾಸಕರು ಹಾಗೂ ಪಕ್ಷೇತರ ಶಾಸಕರು ಸರಕಾರಕ್ಕೆ ನೀಡುವ ಬೆಂಬಲವನ್ನು ಹಿಂತೆಗೆದುಕೊಂಡಿದ್ದ ಸಂದರ್ಭದಲ್ಲಿ ಸ್ಫೀಕರ್ ಬೋಪಯ್ಯ ಅವರು ಶಾಸಕರ ಸದಸ್ಯತ್ವವನ್ನು ರದ್ದು ಪಡಿಸಿರುವ ಕುರಿತು ಪರಿಶೀಲನೆ ನಡೆಸಿದ್ದ ರಾಜ್ಯಪಾಲರು ಇದು ಸಂವಿಧಾನ ಬಾಹಿರವಾಗಿದ್ದು, ರಾಜ್ಯ ಸರಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರು.