ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಕುರ್ಚಿ ಬಿಡ್ಲಿ, ಸರ್ಕಾರ ವಜಾಗೊಳಿಸಿ: ಕಾಂಗ್ರೆಸ್ ಪಟ್ಟು (BJP | Yeddyurappa | Congress | Lokayukta | Illegal Mining Report | Siddaramaiah)
ಸಿಎಂ ಕುರ್ಚಿ ಬಿಡ್ಲಿ, ಸರ್ಕಾರ ವಜಾಗೊಳಿಸಿ: ಕಾಂಗ್ರೆಸ್ ಪಟ್ಟು
ಬೆಂಗಳೂರು, ಗುರುವಾರ, 28 ಜುಲೈ 2011( 20:46 IST )
ಗಣಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಗುರುವಾರ ನಗರವನ್ನು ಸಂಪರ್ಕಿಸುವ ನಾಲ್ಕು ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆಸಿತು.
ರಾಜರಾಜೇಶ್ವರಿ ನಗರ ಬಳಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮೈಸೂರು ರಸ್ತೆ ಸಮೀಪ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೋಲಾರ ರಸ್ತೆಯಲ್ಲಿ ಪಕ್ಷದ ಉಪಾಧ್ಯಕ್ಷ ಎ.ಕೃಷ್ಣಪ್ಪ, ಹೊಸೂರು ರಸ್ತೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸುಮಾರು 1ಗಂಟೆಗಳ ಕಾಲ ರಸ್ತೆ ರೋಖೋ ನಡೆಸಿ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಸಾವಿರಾರು ಕೋಟಿ ರೂ.ಗಳ ಗಣಿ ಹಗರಣದಲ್ಲಿ ಭಾಗಿಯಾಗಿ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್, ಅಧಿಕಾರದ ಕುರ್ಚಿಗೆ ಅಂಟಿಕೊಂಡು ಕುಳಿತಿರುವ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರದ ನಾಲ್ವರ ಮಂತ್ರಿಗಳ ವಿರುದ್ಧವೂ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ. ಅಕ್ರಮ ಗಣಿ ಹಗರಣದ ಹಿಂದೆ ಸರ್ಕಾರವೇ ಶಾಮೀಲಾಗಿರುವುದಾಗಿ ಆರೋಪಿಸಿದರು.
ಹಗರಣಗಳ ಆರೋಪ ಕೇಳಿ ಬಂದ ಕೂಡಲೇ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಭಂಡತನ ತೋರಿ ಕುರ್ಚಿಗೆ ಅಂಟಿಕೊಂಡಿರುವ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವವರೆಗೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.