ಕಳೆದ ಹಲವು ತಿಂಗಳುಗಳಿಂದ ಮಂತ್ರಿಯಾಗಲು ಕಾತುರದಲ್ಲಿರುವ ಶಾಸಕ ಆರ್.ವರ್ತೂರ್ ಪ್ರಕಾಶ್ ಅವರ ಆಸೆ ಈಡೇರುವುದು ಅನುಮಾನವಾಗಿದೆ.
ಲೋಕಾಯುಕ್ತರು ಸಲ್ಲಿಸಿದ ವರದಿಯ ಆರೋಪಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದರಿಂದ, ಇವರನ್ನೇ ನಂಬಿ ಸಚಿವ ಸ್ಥಾನಕ್ಕೆ ಕಾಯುತ್ತಿದ್ದ ವರ್ತೂರ್ ಮಂತ್ರಿಗಿರಿ ತಪ್ಪಲಿದೆಯೇ ಎನ್ನುವ ಬೀತಿಯಿಂದ ಕಂಗಾಲಾಗಿದ್ದಾರೆ.
ತಮಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿದ್ದ ರೆಡ್ಡಿ ಸಹೋದರರೇ ಸಚಿವ ಸ್ಥಾನ ಕಳೆದುಕೊಳ್ಳುವ ಹಂತ ತಲುಪಿದ್ದರಿಂದ ,ಕೈಗೆ ಬಂದ ತುತ್ತು ಬಾಯಿಗೆ ತಲುಪಲಿಲ್ಲ ಎಂದು ವರ್ತೂರ್ ಗೊಣಗುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸಹ ವರ್ತೂರ್ ಪ್ರಕಾಶ್‌ಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಯಾಗಿ ಈಶ್ವರಪ್ಪ ಆಯ್ಕೆಯಾದಲ್ಲಿ ಕುರುಜ ಜನಾಂಗಕ್ಕೆ ಹೆಚ್ಚಿನ ಸ್ಥಾನ ಸಂಪುಟದಲ್ಲಿ ಕಲ್ಪಿಸುವುದು ಕಷ್ಟವಾಗಬಹುದು. ಈಗಾಗಲೇ ಕುರುಬ ಜನಾಂಗದ ವಿಜಯ್ ಶಂಕರ್ ಮಂತ್ರಿಯಾಗಿದ್ದಾರೆ. ಬಿಜೆಪಿ ಸೇರಿರುವ ಕರಡಿ ಸಂಗಣ್ಣ ಕೂಡಾ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಹೀಗಾಗಿ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಅವರ ಬಯಕೆ ಈಡೇರುವುದೇ ಎನ್ನುವ ಅನುಮಾನ ಕಾಡುತ್ತಿದೆ. ಈಶ್ವರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾದಲ್ಲಿ ಕಾಡಿ ಬೇಡಿ ಒಂದು ಸಣ್ಣ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.