ಅಕ್ರಮ ಗಣಿಗಾರಿಕೆಯಲ್ಲಿ ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಬಳಿಕ ಹುದ್ದೆ ತೊರೆಯುವಂತೆ ಹೈಕಮಾಂಡ್‌ನಿಂದ ಸೂಚನೆ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲ ಬಾರಿ ಮೌನ ಮುರಿದು ಊಹಾಪೋಹಗಳಿಗೆ ತೆರೆ ಎಳೆದಿದ್ದು, ಪಕ್ಷದ ನಿರ್ದೇಶನಕ್ಕೆ ಮಣಿಜು ಭಾನುವಾರ (ಜು.31)ರಂದು ಪದತ್ಯಾಗ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಚಾನೆಲ್‌ಗಳಲ್ಲೆಲ್ಲಾ ಯಡಿಯೂರಪ್ಪ ಹೈಕಮಾಂಡ್‌ಗೆ ಧಮಕಿ ಹಾಕಿದ್ದಾರೆ, ಅವರು ಬಡ ಪೆಟ್ಟಿಗೆ ಕೆಳಗಿಳಿಯುವುದಿಲ್ಲ ಎಂಬಿತ್ಯಾದಿ ಊಹಾಪೋಹದ ವರದಿಗಳ ಬೆನ್ನಿಗೇ ಸ್ಪಷ್ಟನೆ ನೀಡಿರುವ ನಿರ್ಗಮನ ಮುಖ್ಯಮಂತ್ರಿ, ರಾಜ್ಯದಲ್ಲಿ ಪಕ್ಷವನ್ನು ಶೂನ್ಯದಿಂದ ಕಟ್ಟಿ ಬೆಳೆಸಿದ್ದೇನೆ ಮತ್ತು ಭವಿಷ್ಯದಲ್ಲಿ ಕೂಡ ಪಕ್ಷಕ್ಕಾಗಿ ದುಡಿಯಲು ಸಿದ್ಧ ಎಂದು ಹೇಳಿದ್ದಾರೆ. ತಾನು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು, ಆಷಾಢ ಮಾಸವು ಜು.30ರಂದು ಕೊನೆಗೊಳ್ಳುತ್ತದೆ. ಅದರ ಬಳಿಕ ಆ.31ರಂದು ರಾಜೀನಾಮೆ ನೀಡುವುದಾಗಿ ಗುರುವಾರ ತಡರಾತ್ರಿ ಹೇಳಿದರು.
2008ರಲ್ಲಿ ಬಿಜೆಪಿಯ ದಕ್ಷಿಣ ಭಾರತದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದ ಯಡಿಯೂರಪ್ಪ ಅವರ ಮೇಲೆ ಪ್ರತಿಪಕ್ಷಗಳು ಪ್ರತೀ ಕ್ಷಣದಲ್ಲಿಯೂ ದಾಳಿ ನಡೆಸುತ್ತಾ, ಈಗಾಗಲೇ ಹಲವಾರು ಕಂಟಕಗಳಿಂದ ಪಾರಾಗಿದ್ದರು. ಆದರೆ ಈ ಬಾರಿ ಲೋಕಾಯುಕ್ತರೇ ತಮ್ಮ ವರದಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ವಿಧಿಯಿಲ್ಲದೆ ಅವರು ಪದತ್ಯಾಗ ಮಾಡಬೇಕಾಗಿ ಬಂದಿದೆ.
ಯಡಿಯೂರಪ್ಪ ಜೊತೆಗೆ ಅವರ ಸಂಪುಟದ ಸಚಿವರಾದ ರೆಡ್ಡಿ ಸಹೋದರರ ಮೇಲೂ ಬಲವಾದ ಆರೋಪಗಳಿವೆ. ಆದರೆ, ಲೋಕಾಯುಕ್ತರು ತಮ್ಮ ವರದಿಯಲ್ಲಿ ಹಲವು ರಾಜಕಾರಣಿಗಳ ಹೆಸರು ಉಲ್ಲೇಖಿಸಿದ್ದರೂ, ಮುಖ್ಯಮಂತ್ರಿಯ ಹೆಸರನ್ನು ಮಾತ್ರವೇ ಪತ್ರಿಕಾಗೋಷ್ಠಿಯಲ್ಲಿ ಸವಿವರವಾಗಿ ಪ್ರಸ್ತಾಪಿಸಿರುವುದು ಮತ್ತು ಹಿಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಬಗ್ಗೆ ಒಂದು ಸಾಲಿನ ಉಲ್ಲೇಖವಿದ್ದರೆ, ಅದಕ್ಕೆ ಹಿಂದಿನ ಮುಖ್ಯಮಂತ್ರಿಗಳ ಉಲ್ಲೇಖವೇ ಇಲ್ಲದಿರುವುದು ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಆಹಾರವಾಗಿದೆ.