ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ನಿವಾಸದಲ್ಲಿ ಕಣ್ಣೀರಿಟ್ಟ ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ (BJP | Yeddyurappa | Shobha karandlaje | Illegal Mining Report | Lokayukta)
ಸಿಎಂ ನಿವಾಸದಲ್ಲಿ ಕಣ್ಣೀರಿಟ್ಟ ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ
ಬೆಂಗಳೂರು, ಶುಕ್ರವಾರ, 29 ಜುಲೈ 2011( 13:09 IST )
ಅಕ್ರಮ ಗಣಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ರಾಜ್ಯರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ರಂಗೇರತೊಡಗಿದ್ದರೆ, ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಸೂಚನೆ ನೀಡಿದ ನಂತರ ನಿಷ್ಠಾವಂತ ಶಾಸಕರ, ಸಂಸದರ ಪಡೆ ಸಿಎಂ ನಿವಾಸದಲ್ಲಿ ಗುರುವಾರ ದೀರ್ಘಕಾಲ ಮಾತುಕತೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿಯಿಂದ ಬೀಳ್ಕೊಟ್ಟ ಸಂದರ್ಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ ಸೇರಿದಂತೆ ಹಲವರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.
ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂಬ ಹೈಕಮಾಂಡ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಶಾಸಕರು, ಸಚಿವರಲ್ಲಿ ದುಗುಡ ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಸಚಿವರು, ಶಾಸಕರು ಒತ್ತಡದ ನಡುವೆಯೇ ಆಪ್ತರ ಜತೆ ಮಾತುಕತೆ ನಡೆಸಿದರು. ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಬಂದ ಯಡಿಯೂರಪ್ಪ ಅವರು ಅಲ್ಲಿದ್ದ ಎಲ್ಲರಿಗೂ ಹಸ್ತಲಾಘವ ಮಾಡಿದರು. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಈ ಮಾತನ್ನು ಕೇಳಿಸಿಕೊಂಡ ಸಚಿವೆ ಶೋಭಾ, ಶಾಸಕರಾದ ಭಾರತಿ ಶೆಟ್ಟಿ, ಪ್ರೊ.ಎಸ್.ಆರ್.ಲೀಲಾ, ಸುನಿಲ್ ವಲ್ಯಾಪುರೆ ಮೊದಲಾದವರು ಒತ್ತರಿಸಿ ಬಂದ ದುಃಖ ತಡೆಯಲಾರದೆ ಕಣ್ಣೀರಿಟ್ಟರು. ಹಲವರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು.
ಈ ಸಂದರ್ಭದಲ್ಲಿ ಹೊರಬಂದ ಅಬಕಾರಿ ಸಚಿವ ರೇಣುಕಾಚಾರ್ಯ ಕೂಡ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೆ, ಕಣ್ಣೀರಿಟ್ಟ ಘಟನೆ ನಡೆಯಿತು.