ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಯಲ್ಲಿ ಹೊಸ ತಿರುವು: ಸಿಎಂಗೆ ಹೆಚ್ಚುತ್ತಿದೆ ಬೆಂಬಲ (Yeddyurappa | Resignation | BJP | Lokayukta Report | Illegal Mining)
ಲೋಕಾಯುಕ್ತ ವರದಿಯಲ್ಲಿ ಹೆಸರಿದೆ ಎಂಬ ಕಾರಣಕ್ಕೆ ರಾಜ್ಯದ ಶಾಸಕರ ಅಭಿಪ್ರಾಯ ಸಂಗ್ರಹಿಸದೆಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವಂತೆ ಆದೇಶ ನೀಡುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧುವಾದ ನಿರ್ಧಾರವಲ್ಲ ಎಂದು ಬೆಂಗಳೂರು ಉತ್ತರ ಸಂಸದ, ಮಾಜಿ ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಅವರು ಹೇಳಿರುವುದರೊಂದಿಗೆ, ಯಡಿಯೂರಪ್ಪ ಅವರಿಗೂ ಸಂಸದರು, ಶಾಸಕರ ಬೆಂಬಲ ಗೋಚರಿಸಲಾರಂಭಿಸಿದೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಅಲೆಗಳು ಏಳತೊಡಗಿದಂತಾಗಿದ್ದು, ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದೆ ಎಂದು ಸುಮಾರು 15 ಸಂಸದರು ಹಾಗೂ 60ಕ್ಕೂ ಹೆಚ್ಚು ಶಾಸಕರು ಭಾವಿಸಿದ್ದಾರೆ.

ಮುಖ್ಯಮಂತ್ರಿಯನ್ನು ಶುಕ್ರವಾರ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಚಂದ್ರೇಗೌಡ, ನನಗೆ ಕಾನೂನು ಚೆನ್ನಾಗಿ ಗೊತ್ತಿದೆ. ವರದಿಯಲ್ಲಿ ಹೆಸರಿದ್ದ ಮಾತ್ರಕ್ಕೇ ಆರೋಪ ಸಾಬೀತಾದಂತಾಗುವುದಿಲ್ಲ ಎಂದರಲ್ಲದೆ, ಕೇಂದ್ರೀಯ ನಾಯಕರು ರಾಜ್ಯದ ಶಾಸಕರ ಅಭಿಪ್ರಾಯ ಪಡೆಯದೆ ರಾಜೀನಾಮೆಗೆ ಸೂಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಾದರೂ, ಈಗ ಅವರು ರಾಜ್ಯ ಬಿಜೆಪಿ ಶಾಸಕರು, ಸಂಸದರ ಸಭೆ ಕರೆದಿರುವುದರಿಂದ ನಮ್ಮ ಅಹವಾಲನ್ನು ಕೇಂದ್ರೀಯ ನಾಯಕರ ಗಮನಕ್ಕೆ ತಂರುವುದಾಗಿ ಹೇಳಿದರು.

ಲೋಕಾಯುಕ್ತರು ನೋಟಿಸ್ ಕೊಟ್ಟು ವಿಚಾರಣೆ ಮಾಡಿಲ್ಲ. ಹೀಗಾಗಿ ವರದಿ ಬಂದಾಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಸರಿಯಲ್ಲ. ಅವರು ಮಾಡಿದ್ದು ತಪ್ಪು ಅಂತ ಹೇಳಲು ನ್ಯಾಯಾಲಯಗಳಿವೆ. ಆ ಕೋರ್ಟು ಏನಾದರೂ ಮುಖ್ಯಮಂತ್ರಿ ವಿರುದ್ಧ ತೀರ್ಪು ಕೊಟ್ಟರೆ, ನಾವೇ ಅವರಿಗೆ ರಾಜೀನಾಮೆ ಕೊಡಿ ಅಂತ ಕೇಳುತ್ತೇವೆ. ಆದರೆ, ನ್ಯಾಯಾಲಯವು ತಪ್ಪಿತಸ್ಥ ಅಂತ ಹೇಳದೆಯೇ, ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಅವರು ವಿವರಿಸಿದರು.

ಲೋಕಾಯುಕ್ತ ವರದಿಯಲ್ಲಿ ಮುಖ್ಯಮಂತ್ರಿಯವರ ಮೇಲೆ ನೇರ ಆರೋಪಗಳಿಲ್ಲ. ಮತ್ತು ಹಿಂದಿನ ಮುಖ್ಯಮಂತ್ರಿಗಳ ಅಕ್ರಮದ ಉಲ್ಲೇಖವೂ ಇಲ್ಲ. ಹೀಗಾಗಿ ಲೋಕಾಯುಕ್ತ ವರದಿಯ ಪಾವಿತ್ರ್ಯತೆ ಹಾಳಾಗಿದೆ ಎಂದ ಅವರು, ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ ಎಂಬುದನ್ನು ಕೇಂದ್ರೀಯ ನಾಯಕರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಶಾಸಕ ಬಿ.ಪಿ.ಹರೀಶ್ ಕೂಡ ಇದೇ ಮಾತನ್ನು ಹೇಳಿದ್ದು, ನಮ್ಮ ಅಹವಾಲು ಕೇಳಲೆಂದೇ ಬಿಜೆಪಿ ವರಿಷ್ಠರು ಶಾಸಕರ ಸಭೆ ಕರೆದಿದ್ದಾರೆ. ಆದರೆ, ಎಲ್ಲಿ, ಯಾವಾಗ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದು ಅಸಮಾಧಾನದಿಂದಲೇ ಹೇಳಿದರು. ಸುಮಾರು 15ಕ್ಕೂ ಹೆಚ್ಚು ಸಂಸದರು, 60ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬ ಇರಾದೆಯಲ್ಲಿದ್ದಾರೆ ಎಂದ ಅವರು, ಇದನ್ನು ನಾವು ವರಿಷ್ಠರ ಬಳಿ ತೋಡಿಕೊಳ್ಳುತ್ತೇವೆ ಎಂದರು.

ಆದರೂ ಯಡಿಯೂರಪ್ಪ ಅವರನ್ನು ಬದಲಾಯಿಸಲೇಬೇಕೆಂದಿದ್ದರೆ, ಅವರು ಹೇಳುವ ವ್ಯಕ್ತಿಯನ್ನೇ ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ಮಾತುಗಳನ್ನು ಈಗಾಗಲೇ ಬಳ್ಳಾರಿ ಗಣಿ ಧಣಿ ಮಂತ್ರಿಗಳಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಸಚಿವ ವಿ.ಸೋಮಣ್ಣ ಅವರು ಕೂಡ ಶುಕ್ರವಾರ ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲ ತಿಳಿಸಿದ್ದಾರೆ. ಕೇಂದ್ರೀಯ ನಾಯಕರು ಹೊಸ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆಯಲ್ಲಿ ನಿರತರಾಗಿರುವಂತೆಯೇ ಯಡಿಯೂರಪ್ಪ ಅವರ ಪರವಾಗಿ ಧ್ವನಿ ಕೇಳಿಬರುತ್ತಿರುವುದು ಹೊಸ ಬೆಳವಣಿಗೆಗಳಿಗೆ ಮುನ್ನುಡಿ ಹಾಡಿದಂತಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಡಿಯೂರಪ್ಪ, ರಾಜೀನಾಮೆ, ಬಿಜೆಪಿ, ಲೋಕಾಯುಕ್ತ ವರದಿ, ಅಕ್ರಮ ಗಣಿಗಾರಿಕೆ