ಎಲ್ಲ ಎಂಎಲ್ಎ,ಸಂಸದರು ಸಿಎಂ ಬೆಂಬಲಕ್ಕಿದ್ದಾರೆ: ಸಿ.ಟಿ.ರವಿ
ಬೆಂಗಳೂರು, ಶುಕ್ರವಾರ, 29 ಜುಲೈ 2011( 15:01 IST )
ಬಿಜೆಪಿಯ ಪಕ್ಷದ ಎಲ್ಲ 18 ಸಂಸದರು ಹಾಗೂ 121 ಮಂದಿ ಶಾಸಕರೂ ಯಡಿಯೂರಪ್ಪ ಅವರ ಪರವಾಗಿದ್ದಾರೆ, ಪಕ್ಷವು ಇಭ್ಭಾಗವಾಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮುಖಂಡ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಒಂದೆಡೆ ಸಿಎಂ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದರೆ ಇನ್ನೊಂದೆಡೆ ಪಕ್ಷದ ವರಿಷ್ಟರೊಂದಿಗೆ ರಾಜ್ಯ ಮುಖಂಡರು ಸಭೆ ನಡೆಸುತ್ತಿದ್ದಾರೆ.
ಈ ಮೊದಲು ಪಕ್ಷದ ವರಿಷ್ಟರ ಸೂಚನೆಗೆ ಈ ಮೊದಲು ತಲೆಬಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದ ಯಡಿಯೂರಪ್ಪ ಆನಂತರ ತಮ್ಮ ನಿಲುವು ಬದಲಿಸಿದ್ದಾರೆ ಎಂಬ ಊಹಾಪೋಹಗಳೂ ಎದ್ದಿದ್ದವು. ಈ ಕುರಿತು ಮಾತನಾಡಿದ ಸಿ.ಟಿ.ರವಿ, ಬಿಜೆಪಿಯಲ್ಲಿ ಪಕ್ಷದ ಸಂಸದೀಯ ಸಮಿತಿಯೇ ಸರ್ವೋಚ್ಚವಾಗಿದ್ದು, ಅದರ ತೀರ್ಮಾನವೇ ಅಂತಿಮವಾಗಿದೆ. ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಟರಾದ ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ತಿಳಿಸಿದರು.