ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೊದ್ಲು ರಾಜೀನಾಮೆ, ನಂತ್ರ ಅಭಿಪ್ರಾಯ ಸಂಗ್ರಹ: ಹೈಕಮಾಂಡ್ (BJP | Lokayukta | Santhosh hegde | Illegal mining Report | Yeddyurappa)
ಮೊದ್ಲು ರಾಜೀನಾಮೆ, ನಂತ್ರ ಅಭಿಪ್ರಾಯ ಸಂಗ್ರಹ: ಹೈಕಮಾಂಡ್
ಬೆಂಗಳೂರು, ಶುಕ್ರವಾರ, 29 ಜುಲೈ 2011( 15:34 IST )
ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದಕೈಬಿಡಬಾರದು. ಅಲ್ಲದೇ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೂ ಮುನ್ನ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು ಎಂಬ ಶಾಸಕರ ಒತ್ತಡದ ಬೆನ್ನಲ್ಲೇ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೇ ಹೊಸ ಸಿಎಂ ಆಯ್ಕೆ ವಿಚಾರ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಅಕ್ರಮ ಗಣಿ ವರದಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮೊದಲು ರಾಜೀನಾಮೆ ನೀಡಲಿ. ಆ ಬಳಿಕವೇ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂಬ ಸಂದೇಶವನ್ನು ಸಿಎಂ ಆಪ್ತ ಬೆಂಬಲಿಗರಿಗೆ ರವಾನಿಸಿದೆ.
ಯಡಿಯೂರಪ್ಪ ಅವರ ರಾಜೀನಾಮೆ ಪಡೆಯುವ ಮೊದಲು ಶಾಸಕರು, ಸಂಸದರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಸಿಎಂ ಆಪ್ತ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಯಡಿಯೂರಪ್ಪ ತಾನು ಜುಲೈ 31ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ ಸಂಸದ ಡಿಬಿ ಚಂದ್ರೇಗೌಡ, ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ್ ಹಾಗೂ ಸಚಿವ ವಿ.ಸೋಮಣ್ಣ, ಯಡಿಯೂರಪ್ಪ ನಮ್ಮ ನಾಯಕ, ಅವರ ರಾಜೀನಾಮೆ ಪಡೆಯಬಾರದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್ ಪಡೆಯಬೇಕು ಎಂದು ಒತ್ತಾಯಿಸಿದ್ದರು.