ಯಡಿಯೂರಪ್ಪ ಅವರ ರಾಜೀನಾಮೆ ಕುರಿತು ಪಕ್ಷದ ಸಚಿವರ ನಡುವೆ ವಾದ ವಿವಾದಕ್ಕೆ ಕಾರಣವಾಗಿರುವುದು ಪಕ್ಷದ ಮುಖಂಡರಿಗೆ ಇರುಸು ಮುರಿಸು ಉಂಟುಮಾಡಿದ್ದು, ಅವರನ್ನು ಕರೆದು ಬುದ್ಧಿ ಹೇಳುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಶನಿವಾರ ತಿಳಿಸಿದ್ದಾರೆ.
ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಚಿವ ರಾಮದಾಸ್ ಹೇಳಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಮುಖ್ಯಮಂತ್ರಿ ರಾಜೀನಾಮೆ ಕೇಳಲು ರಾಮದಾಸ್ ಯಾರು?, ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಫಲಾನುಭವಿಯಾಗಿದ್ದ ರಾಮದಾಸ್ ಈಗ ರಾಗ ಬದಲಿಸಿದ್ದಾರೆ ಎಂದು ಆಪಾದಿಸಿದ್ದರು.
ರೇಣುಕಾಚಾರ್ಯ ಹಾಗೂ ರಾಮದಾಸ್ ಅವರ ಭಿನ್ನಾಭಿಪ್ರಾಯಗಳು ಮಾಧ್ಯಮಗಳ ಮೂಲಕ ಬಹಿರಂಗವಾಗಿದ್ದು, ಬಿಜೆಪಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.