ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಒಡಕಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳ ರಾಜೀನಾಮೆ ಬೆಳವಣಿಗೆಗಳ ಪ್ರತಿಕ್ರಿಯಿಸಿದ ಅವರು ಯಾವುದೇ ಭಿನ್ನಪ್ರಾಯವಿಲ್ಲ ಎಂದು ತಿಳಿಸಿದರು.
ಲೋಕಾಯುಕ್ತ ವರದಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ಆದೇಶ ಹೈಕಮಾಂಡ್ ನೀಡಿದ್ದಾರೆ. ಅದರ ಪ್ರಕಾರ ಸಿಎಂ ರಾಜೀನಾಮೆ ಇವತ್ತೇ ಕೊಡುತ್ತಾರೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಆದರೆ ರಾಜೀನಾಮೆ ಸಮಯವನ್ನು ಸಿಎಂ ಅವರೇ ನಿಗದಿ ಮಾಡುತ್ತಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. 31ನೇ ತಾರಿಕಿಗೆ ರಾಜೀನಾಮೆ ಕೊಡುತ್ತೇನೆ ಎಂದು ಪತ್ರ ಮೂಲಕ ವರಿಷ್ಠರಿಗೂ ಈಗಾಗಲೇ ತಿಳಿಸಿದ್ದಾರೆ ಎಂದವರು ಸೇರಿಸಿದರು.
ಮುಂದಿನ ಸಿಎಂ ಆಯ್ಕೆ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಇಲ್ಲಿ ಸಿಎಂ ಬಣ ಅಥವಾ ಸಿಎಂ ವಿರುದ್ಧ ಬಣ ಎಂಬುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದು, ಉತ್ತಮ ಆಡಳಿತವನ್ನು ನೀಡಲಿದ್ದೇವೆ ಎಂದಿದ್ದಾರೆ.
ರಾಜೀನಾಮೆ ನಂತರ ಸಿಎಂ ಅವರಿಗೆ ಶಾಸಕಾಂಗ ಸಭೆ ಕರೆಯುವ ಹಕ್ಕು ಇರುವುದಿಲ್ಲ. ಹೀಗಾಗಿ ಹೈಕಮಾಂಡ್ ಸೂಚನೆಯೆಂತೆ ಮುಂದಿನ ಪ್ರಕ್ರಿಯೆಗಳು ನಡೆಯಲಿದೆ. ಮುಂದಿನ ಸಿಎಂ ಆಯ್ಕೆ ಬಗ್ಗೆ ನಾನು ಯಾವುದೇ ಅಭಿಪ್ರಾಯ ಹೇಳಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಶಾಸಕರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕೆಲವರು ಬಸ್‌ಗಳಲ್ಲಿ ಒಟ್ಟಾಗಿ ಬಂದಿದ್ದಾರೆ. ಇಂದರಿಂದಾಗಿ ಸಿಎಂ ಪರ ಹಾಗೂ ಸಿಎಂ ವಿರುದ್ಧ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.