ಸದಾನಂದ ಗೌಡ ನೂತನ ಸಿಎಂ; ವರಿಷ್ಠರಿಗೆ ಬಿಎಸ್‌ವೈ ಪ್ರಸ್ತಾಪ
ಬೆಂಗಳೂರು, ಭಾನುವಾರ, 31 ಜುಲೈ 2011( 17:15 IST )
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಅಧಿಕೃತವಾಗಿ ಸಲ್ಲಿಸಿದ ನಂತರ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, ನೂತನ ಸಿಎಂ ಸ್ಥಾನಕ್ಕೆ ಸದಾನಂದ ಗೌಡ ಅವರನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ.
ಆ ಮೂಲಕ ತಮ್ಮ ಆಪ್ತರು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದು ಸಿಎಂ ಆಶಯವಾಗಿದೆ. ಈ ಹಿಂದೆಯೇ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ರವಾನಿಸಿದ್ದ ಸಿಎಂ, ತಮಗೆ 80ರಷ್ಟು ಶಾಸಕರ ಬೆಂಬಲವಿದೆ ಎಂದು ಬಲ ಪ್ರದರ್ಶಿಸಿದ್ದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದಿಂದ ತಮ್ಮ ಆಪ್ತ ಸಚಿವರು, ಶಾಸಕರು ಹಾಗೂ ಅಪಾರ ಅಭಿಮಾನಿಗಳ ಜೈಕಾರದೊಂದಿಗೆ ರಾಜ್ಯಭವನಕ್ಕೆ ತೆರಳಿದ್ದ ಯಡಿಯೂರಪ್ಪ, ತಮ್ಮ ಸ್ಥಾನಕ್ಕೆ ರಾಜೀನಾಮೆ ತಿಳಿಸಿದ್ದರು. ರಾಜೀನಾಮೆ ಪತ್ರ ಸ್ವೀಕರಿಸಿರುವ ರಾಜ್ಯಪಾಲರು ನೂತನ ಸಿಎಂ ಆಯ್ಕೆಯಾಗುವ ವರೆಗೂ ಹಂಗಾಮಿಯಾಗಿ ಮುಂದುವರಿಯಲು ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು.
ಆನಂತರ ಮಾತನಾಡಿದ ಸಿಎಂ, ಕಳೆದ ಮೂರು ವರ್ಷ ಹಾಗೂ ಎರಡು ತಿಂಗಳ ಅಧಿಕಾರವಧಿಯು ತೃಪ್ತಿ ಕೊಟ್ಟಿದ್ದು, ಇದಕ್ಕಾಗಿ ರಾಜ್ಯದ ಜನತೆಗೂ ಕೃತಜ್ಞತೆ ಸಲ್ಲಿಸಿದ್ದರು.
ಆಷಾಢದಲ್ಲಿ ಯಾವುದೇ ಕೆಲಸ ಮಾಡಲ್ಲ. ಅದಕ್ಕೆ ಶ್ರಾವಣ ಮಾಸದಲ್ಲಿ ರಾಜೀನಾಮೆ ಕೊಟ್ಟಿದ್ದೇನೆ. ಆ ಮೂಲಕ ಹಿರಿಯರ ಸೂಚನೆಯಂತೆ ನಿಷ್ಠಾವಂತ ಕಾರ್ಯಕರ್ತನಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.
ಶಿಕಾರಪುರದಿಂದ ಸಾಮಾನ್ಯ ಕಾರ್ತನಾಗಿ ಬೆಳೆದು ಬಂದ ನಾನು ಕಳೆದ 40 ವರ್ಷ ಪಕ್ಷದ ಸಂಘಟನೆಗಾಗಿ ಪರಿಶ್ರಮಿಸಿದ್ದೇನೆ. ಹಾಗೆಯೇ ಮುಖ್ಯಮಂತ್ರಿ ಆಗಿ ಸೇವೆ ಮಾಡುವ ಅವಕಾಶ ಕನ್ನಡ ನಾಡಿನ ಜನರು ನನಗೆ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯದ ಜನತೆ ಹಾಗೂ ಸಂಸದರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದಕ್ಕೆ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ್ದಾರೆ. ಪಕ್ಷದ ಶಾಸಕರ ಸೇರಿದಂತೆ ಶಿವಮೊಗ್ಗ, ಶಿಕಾರಿಪುರದ ಜನತೆಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ರೈತನ ಮಗನಾಗಿ ಬೆಳೆದ ನಾನು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಹಲವು ಜನಪರ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಇಷ್ಟಾದರೂ ನನ್ನ ಮೇಲೆ ವೃಥಾ ಆರೋಪ ಮಾಡಲಾಗಿದೆ. ಇವೆಲ್ಲವೂ ಸದ್ಯದಲ್ಲೇ ದೂರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾಗಿ ಮೂರು ವರ್ಷ ಎರಡು ತಿಂಗಳು ಉತ್ತಮ ಅವಕಾಶ ಮಾಡಿಕೊಟ್ಟ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ವರ್ಷದ ಸಾಧನೆ ತೃಪ್ತಿ ತಂದಿದೆ. ವರಿಷ್ಠರು ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನೈಸರ್ಗಿಕ ಸಂಪತ್ತು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.