ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಂದಿನ ಕರ್ನಾಟಕ ಸಿಎಂ ಯಾರ್ರೀ... ಗೌಡ್ರೋ, ಶೆಟ್ಟರೋ? (Chief Minister | Karnataka | Lokayukta | Sadananda Gowda | Jagadish Shettar)
WD
ಬಿಜೆಪಿಯ ಹಿರಿಯ ಮತ್ತು ಪ್ರಭಾವೀ ಮುಖಂಡ ಯಡಿಯೂರಪ್ಪ ಪದತ್ಯಾಗ ಮಾಡಿದ ತಕ್ಷಣವೇ ಬಿಜೆಪಿಯಲ್ಲಿ ಇನ್ನಿಲ್ಲದಂತೆ ಕಾಣಿಸಿಕೊಂಡಿದ್ದ ಬಿಕ್ಕಟ್ಟು, ಮೂರು ದಿನಗಳೇ ಕಳೆದರೂ ಶಮನವಾಗಿಲ್ಲ. ಹೊಸ ಮುಖ್ಯಮಂತ್ರಿ ಆಯ್ಕೆ ಹೆಸರಲ್ಲಿ ಬಿಜೆಪಿಯೊಳಗೆ ಹಲವು ಬಣಗಳು ಹುಟ್ಟಿಕೊಂಡಿದ್ದು, ಅಂತಿಮವಾಗಿ ಇದೀಗ ಸಂಸದ ಸದಾನಂದ ಗೌಡರೋ ಅಥವಾ ಗ್ರಾಮೀಣಾಭಿವೃದ್ಧಿ-ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರೋ ಎಂಬಲ್ಲಿವರೆಗೆ ಬಂದು ತಲುಪಿದೆ.

ಇದೇ ಕಾರಣಕ್ಕೆ, ಬಿಜೆಪಿ ಕೇಂದ್ರೀಯ ನಾಯಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಮಂಗಳವಾರ ಸಂಜೆ ಧಾವಿಸಿ ಬರಲಿದ್ದಾರೆ. ಬುಧವಾರ (ಆ.3)ರಂದು ಹೊಸ ನಾಯಕನ ಆಯ್ಕೆ ನಡೆಯಲಿದೆ ಎಂದು ಈಗಾಗಲೇ ಘೋಷಣೆಯಾಗಿರುವುದರಿಂದ, ನಾಳೆ ಶಾಸಕಾಂಗ ಪಕ್ಷ ಸಭೆ ನಡೆಯಲಿದೆ. ಕಗ್ಗಂಟು ಮುಗಿಯದೇ ಹೋದರೆ, ರಹಸ್ಯ ಮತದಾನದ ಮೂಲಕ ಆಯ್ಕೆ ನಡೆಯುವ ಸಾಧ್ಯತೆಗಳಿವೆ.

ಹೊಸ ಮುಖ್ಯಮಂತ್ರಿಯಾಗಲು ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಮುಂತಾದವರ ಹೆಸರುಗಳೂ ಕೇಳಿಬರುತ್ತಿದ್ದರೂ, ಅಂತಿಮವಾಗಿ ಇಲ್ಲಿ ಎರಡು ಜಾತಿಗಳು ಪ್ರಧಾನ ಪಾತ್ರ ವಹಿಸತೊಡಗಿವೆ. ಅದೆಂದರೆ ವೀರಶೈವ ಮತ್ತು ಒಕ್ಕಲಿಗ. ವೀರಶೈವ ಸಮಾಜದಿಂದ ಶೆಟ್ಟರ್ ಅವರ ಹೆಸರೂ, ಒಕ್ಕಲಿಗ ಸಮುದಾಯದಿಂದ ಸದಾನಂದ ಗೌಡರ ಹೆಸರೂ ಅಂತಿಮವಾಗಿದೆ. ಮತ್ತು ಬಿಜೆಪಿಯ ನೂರಿಪ್ಪತ್ತು ಶಾಸಕರು ಈಗ ಈ ಎರಡು ಆಯ್ಕೆಗಳತ್ತಲೇ ಧ್ರುವೀಕರಣವಾಗುತ್ತಿದ್ದಾರೆ.

ಇವರಲ್ಲಿ ನಿಮ್ಮ ಆಯ್ಕೆ ಯಾವುದು? ಅಂತ ಇಲ್ಲಿ ನಿಮ್ಮ ಮತಗಳನ್ನು ಚಲಾಯಿಸಿಬಿಡಿ ನೋಡೋಣ!

ಇದರ ನಡುವೆ, ಜಗದೀಶ್ ಶೆಟ್ಟರ್ ಅವರು ಅನಂತ್ ಕುಮಾರ್ ಬಣದವರು ಮತ್ತು ಸದಾನಂದ ಗೌಡರು ಯಡಿಯೂರಪ್ಪ ಬಣದವರು ಎಂಬ ಮತ್ತೊಂದು ಅಂಶವೂ ಇದೆ. ಇವೆಲ್ಲಕ್ಕೂ ಮಿಗಿಲಾಗಿ, ರೆಡ್ಡಿ ಬಣ, ಜಾರಕಿಹೊಳಿ ಬಣ... ಹೀಗೆ ಸಣ್ಣ ಪುಟ್ಟ ಕೆಲವೊಂದು ಸ್ಪ್ಲಿಂಟರ್ ಗ್ರೂಪ್‌ಗಳು ಅಂತಿಮ ಕ್ಷಣದಲ್ಲಿ ಯಾವುದೇ ಕಡೆ ವಾಲಬಹುದಾಗಿದೆ.

ಗೌಡರ ಪರ ಸಹಿ ಸಂಗ್ರಹ, ರಾಜೀನಾಮೆ ಬೆದರಿಕೆ?
ಇತ್ತೀಚೆಗೆ ಬಂದಿರುವ ಮಾಹಿತಿಗಳ ಪ್ರಕಾರ, ಡಿ.ವಿ.ಸದಾನಂದ ಗೌಡರ ಪರವಾಗಿ ಈಗಾಗಲೇ 60ಕ್ಕೂ ಹೆಚ್ಚು ಶಾಸಕರು ಸಹಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು, ಅವರ ನೇಮಕ ಮಾಡದೇ ಹೋದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತಾದ ಊಹಾಪೋಹಗಳೂ ಕೇಳಿಬರುತ್ತಿವೆ. ಇದರಲ್ಲಿ ಕೆಲವು ಸಂಸದರು, ಎಂಎಲ್‌ಸಿಗಳು ಕೂಡ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಒಂದು ಮಾಹಿತಿಯ ಪ್ರಕಾರ, ನೂರಿಪ್ಪತ್ತರಲ್ಲಿ ಯಡಿಯೂರಪ್ಪ ಅವರ ಬಳಿ 70 ಶಾಸಕರ ಬೆಂಬಲವಿದ್ದರೆ, ಉಳಿದವರು ವಿರೋಧಿ ಬಣ ಅಂದರೆ ಶೆಟ್ಟರ್ ಪರವಾಗಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ, ಎರಡೂ ಬಣಗಳಲ್ಲಿ ಸಮಬಲದ ಹೋರಾಟವೇರ್ಪಟ್ಟಿದೆ. ಅಂದರೆ ಸುಮಾರು ಅರುವತ್ತರ ಆಸುಪಾಸಿನ ಸಂಖ್ಯಾಬಲ.

ಈ ಎಲ್ಲ ಕಾರಣಗಳಿಂದಾಗಿ, ಒಟ್ಟಾರೆಯಾಗಿ ಲಾಭ ಮಾಡಿಕೊಂಡಿದ್ದು ಹೋಟೆಲ್‌ಗಳು, ರೆಸಾರ್ಟ್‌ಗಳು. ಕಳೆದ ಕೆಲವು ದಿನಗಳಿಂದ ಶಾಸಕರೆಲ್ಲರೂ ರೆಸಾರ್ಟ್‌ಗಳನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಆನಂದದಲ್ಲಿದ್ದಾರೆ. ಚಾನ್ಸರಿ ಹೋಟೆಲ್ ಮತ್ತು ಅಶೋಕ ಹೋಟೆಲ್‌ಗಳಲ್ಲಿ ಬೀಡುಬಿಟ್ಟಿರುವ ಶಾಸಕರು ಒಂದು ಹೋಟೆಲಿನಿಂದ ಮತ್ತೊಂದು ಹೋಟೆಲಿಗೆ ನೆಗೆದಾಡಿದರೆ, ಯಾವ ತಕ್ಕಡಿಯಲ್ಲಿ ಕಪ್ಪೆ ಹೆಚ್ಚಿರುತ್ತದೋ, ಅತ್ತ ಕಡೆಯೇ ಸಿಎಂ ಪಟ್ಟವೂ ಒಲಿದುಬರುವ ಸಾಧ್ಯತೆಗಳಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಖ್ಯಮಂತ್ರಿ, ಕರ್ನಾಟಕ, ಲೋಕಾಯುಕ್ತ, ಗಣಿ ವರದಿ, ಯಡಿಯೂರಪ್ಪ ಉತ್ತರಾಧಿಕಾರಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್