ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಗೌರವಯುತ ಬದುಕು ಸಿಗಬೇಕು. ಹಾಗಾಗಿ ಜನಪರ ಆಡಳಿತ ನೀಡಲು ಶ್ರಮಿಸುವುದಾಗಿ ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಜತೆಗೂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌಡರು, ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದ ಪಕ್ಷದ ಎಲ್ಲಾ ಶಾಸಕರು, ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಶ್ರಮಿಸುವುದಾಗಿ ಹೇಳಿದ ಸದಾನಂದ ಗೌಡರು, ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುವುದಾಗಿ ತಿಳಿಸಿದರು. ಎಲ್ಲರ ವಿಶ್ವಾಸದೊಂದಿಗೆ ಒಳ್ಳೆಯ ಆಡಳಿತ ನೀಡುವ ಗುರಿ ತಮ್ಮದು ಎಂದೂ ಈ ಸಂದರ್ಭದಲ್ಲಿ ನುಡಿದರು.
ರಾಜಭವನಕ್ಕೆ ತೆರಳಿದ ಸದಾನಂದ ಗೌಡ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ನೀಡುವ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ರಾಜಭವನಕ್ಕೆ ಭೇಟಿ ನೀಡಿದರು. ಕ್ಯಾಪಿಟಲ್ ಹೋಟೆಲ್‌ನಿಂದ ತೆರಳಿದ ಸದಾನಂದ ಗೌಡರಿಗೆ ಬಿಜೆಪಿಯ ಹಿರಿಯ ನಾಯಕರು ಸಾಥ್ ನೀಡಿದ್ದರು.