ಆಡಳಿತಾರೂಢ ಬಿಜೆಪಿ ಸಾಕಷ್ಟು ಕಸರತ್ತು, ತಿಕ್ಕಾಟದ ನಂತರ ಹೈಕಮಾಂಡ್ ಕೊನೆಗೂ ನೂತನ ಮುಖ್ಯಮಂತ್ರಿಯನ್ನಾಗಿ ಡಿವಿ ಸದಾನಂದ ಗೌಡರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಕಮಲ ಪಾಳಯಲ್ಲಿ ಮತ್ತೆ ಆಕ್ರೋಶ, ಭಿನ್ನಮತ ಸ್ಫೋಟಗೊಂಡಿದೆ.
ನೂತನ ನಾಯಕನ ಆಯ್ಕೆ ಕಸರತ್ತಿನಲ್ಲಿ ಬಿ.ಎಸ್.ಯಡಿಯೂರಪ್ಪ ಬಣದ ಕೈ ಮೇಲಾಗಿದ್ದು, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅನಂತ್ ಕುಮಾರ್ ಬಣದ ಜಗದೀಶ್ ಶೆಟ್ಟರ್ ಪರಾಭವಗೊಳ್ಳುವ ಮೂಲಕ ತೀವ್ರ ಮುಖಭಂಗಕ್ಕೆ ಈಡಾಗಿದೆ.
ಈ ಹಿನ್ನಲೆಯಲ್ಲಿ ಜಗದೀಶ್ ಶೆಟ್ಟರ್ ಅವರು ಉಪಮುಖ್ಯಮಂತ್ರಿ ಪಟ್ಟ ನೀಡುವ ಹೈಕಮಾಂಡ್ ಆಫರ್ ಅನ್ನು ಕೂಡ ತಿರಸ್ಕರಿಸಿದ್ದಾರೆ. ಇದೀಗ ಈಶ್ವರಪ್ಪ ಬಣದ 55 ಮಂದಿ ಸಚಿವರು, ಶಾಸಕರು ಅಶೋಕ್ ಹೋಟೆಲ್‌ನಲ್ಲಿ ಚರ್ಚೆ ನಡೆಸುತ್ತಿವೆ.
PR
ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ರಾಮದಾಸ್, ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್ ಸೇರಿದಂತೆ ಸುಮಾರು 55 ಮಂದಿ ಭಾಗವಹಿಸಿದ್ದು, ನೂತನ ಸಿಎಂ ಸದಾನಂದ ಗೌಡರ ಪ್ರಮಾಣವಚ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗುವ ತೀರ್ಮಾನವನ್ನೂ ಕೈಗೊಂಡಿದ್ದಾರೆ.
ತಮಗೆ ನೂತನ ಮಂತ್ರಿ ಮಂಡಲದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಈಗಾಗಲೇ ಯಡಿಯೂರಪ್ಪ ಬಣದ ಕೈ ಮೇಲಾಗಿದೆ. ಆದರೆ ಈ ಸಂದರ್ಭದಲ್ಲಿಯೂ ನಮ್ಮ ಬೇಡಿಕೆಗೆ ಮಣಿಯದಿದ್ದರೆ ಸಚಿವ ಸಂಪುಟದಿಂದ ಹೊರಬರುವ ಬಗ್ಗೆಯೂ ಶಾಸಕರಲ್ಲಿ ಚಿಂತನೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿವಿ ಸದಾನಂದ ಗೌಡರನ್ನು ತಾವು ಒಪ್ಪಲು ತಯಾರಿಲ್ಲ ಎಂದು ಈಶ್ವರಪ್ಪ ಬಣದ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ ಬಿಕ್ಕಟ್ಟು ಮುಂದುವರಿದಂತಾಗಿದೆ.