ಸಣ್ಣ-ಪುಟ್ಟ ವಿಷಯಗಳಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಬೇಡಿ. ಸಂಪುಟ ರಚನೆ ವಿಷಯವನ್ನು ನೀವು, ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಹೈಕಮಾಂಡ್ ಜಗದೀಶ್ ಶೆಟ್ಟರ್ ಬಣಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಶನಿವಾರ ಸಂಪುಟ ಸಂಕಟದ ಕಸರತ್ತು ಮುಂದುವರಿದಂತಾಗಿದೆ.
ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಲ್ಲೇಶ್ವರಂನಲ್ಲಿರುವ ಹಳೇ ಬಿಜೆಪಿ ಕಚೇರಿಯಲ್ಲಿ ಸಂಪುಟಕ್ಕೆ ಸೇರಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಚ್ಚೇಗೌಡ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಅಲ್ಲದೇ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ತಮಗೆ ಎರಡು ಡಿಸಿಎಂ ಹುದ್ದೆ ಹಾಗೂ 20 ಕ್ಯಾಬಿನೆಟ್ ಸ್ಥಾನ ನೀಡಬೇಕೆಂಬ ಬೇಡಿಕೆ ಕುರಿತು ಮುಖ್ಯಮಂತ್ರಿ ಸದಾನಂದ ಗೌಡರ ಜತೆ ಮಾತುಕತೆ ನಡೆಸಬೇಕೆಂದು ಜಗದೀಶ್ ಶೆಟ್ಟರ್ ಬಣ ನಿರ್ಧರಿಸಿದೆ. ಈ ಮೊದಲು ಸಂಪುಟ ರಚನೆ ಹೈಕಮಾಂಡ್ ನಿರ್ದೇಶನದಂತೆಯೇ ನಡೆಯಬೇಕೆಂದು ಶೆಟ್ಟರ್ ಬಣ ಸೂಚಿಸಿತ್ತು. ಇಂದು ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳು ಹಾಗೂ ಬೇರೆ, ಬೇರೆ ಕಾರ್ಯದಲ್ಲಿ ತೊಡಗಿರುವುದರಿಂದ ಮಾತುಕತೆಗೆ ಅವಕಾಶವಾಗಿಲ್ಲ. ಆ ನಿಟ್ಟಿನಲ್ಲಿ ಇಂದು ಸಂಜೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆರ್.ಅಶೋಕ್, ಸಂಪುಟ ರಚನೆ ವಿಷಯ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಬಿಟ್ಟ ವಿಷಯ. ಅವರು ಪಕ್ಷದ ರಾಜ್ಯಾಧ್ಯಕ್ಷರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ನಾವು ಬಿಜೆಪಿ ಕಚೇರಿಗೆ ಬರುವುದು ವಾಡಿಕೆ. ಈ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಬಣದ ಹಗ್ಗಜಗ್ಗಾಟ ಮುಂದುವರಿದಿದೆ. ಇದೀಗ ಶೆಟ್ಟರ್ ಬಣ ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಮುಂದಾಗಿದೆ. ಏತನ್ಮಧ್ಯೆ ಸಂಪುಟ ಕಗ್ಗಂಟು ಸಮಸ್ಯೆ ಇತ್ಯರ್ಥಕ್ಕಾಗಿ ಸದಾನಂದ ಗೌಡರು ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.