ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ಆಯ್ತು, ಇನ್ನುಳಿದವರ ತಲೆದಂಡ ಯಾವಾಗ?: ಕಾಂಗ್ರೆಸ್ (Yeddyurappa | Sadananda Gowda | illegal mining | Parameshwar | Lokayukta)
ಯಡ್ಡಿ ಆಯ್ತು, ಇನ್ನುಳಿದವರ ತಲೆದಂಡ ಯಾವಾಗ?: ಕಾಂಗ್ರೆಸ್
ಬೆಂಗಳೂರು, ಶನಿವಾರ, 6 ಆಗಸ್ಟ್ 2011( 15:24 IST )
ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತದ ಹೊಗೆ ಶಮನವಾಗಿಲ್ಲ. ಹಾಗಾಗಿ ನೂತನ ಮುಖ್ಯಮಂತ್ರಿ ಸದಾನಂದ ಗೌಡ ಪಕ್ಷದೊಳಗಿನಿಂದಲೇ ಹಲವು ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಷ್ಟೇ ಅಲ್ಲ ತಾನು ಮತ್ತೆ ಆರು ತಿಂಗಳೊಳಗೆ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುವುದಾಗಿ ನುಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅಕ್ರಮ ಗಣಿ ವರದಿಯಲ್ಲಿ ಆರೋಪಿತರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಾಲ್ಕು ಮಂದಿ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕ್ರಿಯೆಯನ್ನು ಆರಂಭಿಸುವಂತೆ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅವರು ಒತ್ತಾಯಿಸಿದ್ದಾರೆ. ಲೋಕಾಯುಕ್ತರ ವರದಿಯಲ್ಲಿ ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಹಾಗೂ ಸಚಿವ ಸೋಮಣ್ಣ ಹೆಸರು ಉಲ್ಲೇಖವಾಗಿದೆ. ಅದೇ ರೀತಿ ಎರಡು ಗಣಿ ಕಂಪನಿಗಳಿಗೆ ಅನುಮತಿ ನೀಡಿರುವ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಕೂಡ ವರದಿಯಲ್ಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ಅಂತಿಮ ವರದಿ ಬಗ್ಗೆ ನೂತನ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವುದನ್ನೇ ಜನರು ಕುತೂಹಲದಿಂದ ಕಾಯುತ್ತಿರುವುದಾಗಿ ಹೇಳಿದರು.
ಅಷ್ಟೇ ಅಲ್ಲ ಗಣಿ ವರದಿಯಲ್ಲಿ ಸುಮಾರು 787 ಅಧಿಕಾರಿಗಳು ಹಾಗೂ ಹಲವು ಕಾರ್ಪೋರೇಟ್ ಕಂಪನಿಗಳು ಕೂಡ ಆರೋಪಿತ ಸ್ಥಾನದಲ್ಲಿದ್ದಾರೆ. ಹಾಗಾಗಿ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ಶಿಫಾರಸ್ಸಿಗೆ ಸರ್ಕಾರ ಮೊದಲು ಅಂಕಿತ ಹಾಕಲಿದೆ ಎಂಬ ನಿರೀಕ್ಷೆಯಲ್ಲಿರುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಅದೇ ರೀತಿ ಪ್ರವಾಹದಿಂದ ತತ್ತರಿಸಿ ಹೋಗಿ ಮನೆ ಮಠ ಕಳೆದುಕೊಂಡಿರುವ ಸುಮಾರು 17 ಜಿಲ್ಲೆಗಳ ಜನರ ಪುನರ್ವಸತಿ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಪರಮೇಶ್ವರ್ ಒತ್ತಾಯಿಸಿದರು. ಅಲ್ಲದೇ ರಾಜ್ಯದಲ್ಲಿ ಅಸಮರ್ಪಕವಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು.