ಜಗದೀಶ್ ಶೆಟ್ಟರ್ ಅವರಿಗೆ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಖಾತೆ ಸೇರಿದಂತೆ ಉಭಯ ಬಣಗಳಿಗೂ ಫಿಫ್ಟಿ-ಫಿಫ್ಟಿ ಖಾತೆ ಹಂಚಿಕೆ ನಿರ್ಧಾರ ಮಾಡುವ ಮೂಲಕ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸಂಪುಟ ಸಂಕಟ ಕೊನೆಗೂ ಇತ್ಯರ್ಥವಾಗುವ ಹಂತ ತಲುಪಿರುವುದಾಗಿ ಮೂಲಗಳು ತಿಳಿಸಿವೆ.
ಸಂಪುಟ ರಚನೆ ಕುರಿತಂತೆ ನೀವು, ನೀವೇ ಇತ್ಯರ್ಥಪಡಿಸಿಕೊಳ್ಳಿ ಎಂಬ ಹೈಕಮಾಂಡ್ ಖಡಕ್ ಸೂಚನೆಗೆ ತಲೆಬಗ್ಗಿಸಿದ ಜಗದೀಶ್ ಶೆಟ್ಟರ್ ಬಣ ಶನಿವಾರ ತಮ್ಮ ಬಣದ ಶಾಸಕರ ಜತೆ ಹಲವಾರು ಸುತ್ತಿನ ಮಾತುಕತೆ ನಡೆಸಿತ್ತು. ಸಂಜೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿ ಸಂಧಾನ ಸೂತ್ರಕ್ಕೆ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ.
ಸೋಮವಾರ ಅಥವಾ ಮಂಗಳವಾರ ನೂತನ ಸಚಿವರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಸಂಪುಟದಲ್ಲಿ ಶೆಟ್ಟರ್ ಹಾಗೂ ಸದಾನಂದ ಗೌಡ ಬಣಗಳಿಗೆ ಸಮಾನ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಏತನ್ಮಧ್ಯೆ ಜಗದೀಶ್ ಶೆಟ್ಟರ್ ಬಣ ಇಂಧನ, ಜಲಸಂಪನ್ಮೂಲ, ಗೃಹ ಖಾತೆ, ಲೋಕೋಪಯೋಗಿ ಸೇರಿದಂತೆ ಐದು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದೆ. ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 34 ಸದಸ್ಯರಿಗೆ ಅವಕಾಶ ದೊರೆಯಲಿದೆ.
ಆ ನಿಟ್ಟಿನಲ್ಲಿ ಇಂದು ಸಂಜೆ ಮುಖ್ಯಮಂತ್ರಿ ನಿವಾಸದಲ್ಲಿ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ. ನಾಲ್ಕೈದು ದಿನಗಳಲ್ಲಿ ಸಂಪುಟ ರಚನೆ ಸಾಧ್ಯತೆ ಇದ್ದು, ನಿಗಮ-ಮಂಡಳಿಯಲ್ಲೂ ಸಮಾನ ಅವಕಾಶ ದೊರಕಿಸಿ ಕೂಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಭಾನುವಾರ ಬಿಜೆಪಿ ಮುಖಂಡರ ಸಭೆ: ನೂತನ ಸಂಪುಟ ರಚನೆ ಕಸರತ್ತಿಗೆ ಸಂಬಂಧಿಸಿದಂತೆ ಭಾನುವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಹಳೇ ಕಚೇರಿಯಲ್ಲಿ ಬಿಜೆಪಿ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಶೋಭಾ ಕರಂದ್ಲಾಜೆ, ವಿ.ಎಸ್.ಆಚಾರ್ಯ, ಆರ್ಎಸ್ಎಸ್ ಮುಖಂಡ ಸತೀಶ್, ಸಂತೋಷ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ.
ಸೋಮವಾರವೇ ಪ್ರಮಾಣವಚನ? ಭಾನುವಾರ ನೂತನ ಸಚಿವರ ಪಟ್ಟಿ ಅಂತಿಮಗೊಳಿಸಲು ಎರಡೂ ಬಣದ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ಸಾಧ್ಯವಾದರೆ ಸೋಮವಾರವೇ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ. ಒಂದು ವೇಳೆ ಒಮ್ಮತ ಮೂಡದಿದ್ದರೆ ಬುಧವಾರ ನೂತನ ಸಚಿವರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶೆಟ್ಟರ್ ಬಣದ 12 ಹಾಗೂ ಬಿಎಸ್‌ವೈ ಬಣದ 13 ಸೇರಿದಂತೆ 25 ಮಂದಿ ಮೂದಲ ಹಂತದಲ್ಲಿ ಪ್ರಮಾಣವಚನ ಸಾಧ್ಯತೆ ಇದೆ.
ಸಚಿವಗಿರಿಗಾಗಿ ತೆರೆಮರೆ ಕಸರತ್ತು: ಒಂದೆಡೆ ಜಗದೀಶ್ ಶೆಟ್ಟರ್ ಮತ್ತು ಬಿಎಸ್‌ವೈ ಬಣ ಫಿಫ್ಟಿ-ಫಿಫ್ಟಿ ಖಾತೆ ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಸಂಪುಟ ರಚನೆ ಕರಸತ್ತು ಬಿಕ್ಕಟ್ಟಿಗೆ ಅಂತ್ಯ ಹಾಡಲು ಮುಂದಾಗಿದ್ದರೆ, ಮತ್ತೊಂದೆಡೆ ಸಚಿವಗಿರಿ ಮೇಲೆ ಕಣ್ಣಿಟ್ಟಿದ್ದ ಹಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈ ಎಲ್ಲ ಬಿಕ್ಕಟ್ಟನ್ನು ನೂತನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಯಾವ ರೀತಿಯಲ್ಲಿ ಬಗೆಹರಿಸಲಿದ್ದಾರೆ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.