ಸಂಸತ್ತಿನಲ್ಲಿ ಮಂಡಿಸಲಾಗಿರುವ ಜನಲೋಕಪಾಲ ಮಸೂದೆಯು ಜನವಿರೋಧಿಯಾಗಿದೆ ಎಂದು ಆಪಾದಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆಗಸ್ಟ್ 16ರಿಂದ ಕೈಗೊಳ್ಳುವ ನಿರಶನ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಜನಲೋಕಪಾಲ ಮಸೂದೆ ಕರಡು ರಚನೆಗಾಗಿ ರಚಿಸಲಾದ 'ನಾಗರಿಕ ಸಮಿತಿ'ಯ ಸದಸ್ಯರೂ ಆಗಿರುವ ಹೆಗ್ಡೆ ಅವರು ಈ ಹಿಂದೆಯೇ ಭ್ರಷ್ಟಾಚಾರ ವಿರುದ್ಧದ ತಮ್ಮ ಹೋರಾಟ ನಿರಂತರ ಎಂದು ಸಾರಿದ್ದರು.
ಅಣ್ಣಾ ಹಜಾರೆ ನೇತೃತ್ವದಲ್ಲಿ ಆಗಸ್ಟ್ 16ರಂದು ದೇಶದ್ಯಾಂತ ಧರಣಿ ಸತ್ಯಾಗ್ರಹ ನಡೆಯಲಿದೆ. ಅಂದೇ ಬೆಂಗಳೂರಿನಲ್ಲೂ ಇಂಡಿಯಾ ಎಂಗೈಸ್ಟ್ ಕರಪ್ಷನ್ (ಐಎಸಿ) ಸಂಘಟನೆಯ ನೇತೃತ್ವದಲ್ಲಿ ಧರಣಿ ನಡೆಯಲಿದೆ. ಆದರೆ ಅಂದು ನಾನು ನಗರದಲ್ಲಿರುವುದಿಲ್ಲ. ಹೀಗಾಗಿ 17ರಂದು ಹೋರಾಟಕ್ಕೆ ಕೈಜೋಡಿಸಲಿದ್ದೇನೆ ಎಂದಿದ್ದಾರೆ.
ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ವಿರುದ್ಧ ಸಮರವನ್ನೇ ಸಾರಿದ್ದ ಹೆಗ್ಡೆ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ವರದಿ ಸಲ್ಲಿಸುವ ಮೂಲಕ ಇಡೀ ರಾಜಕೀಯ ವಲಯದಲ್ಲೇ ಸಂಚಲನ ಮೂಡಿಸಿದ್ದರು. ಇದರಂತೆ ಮಾಜಿ ಸಿಎಂ ಬಿ. ಎಸ್. ಯೂಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿತ್ತು.