ಎರಡು ಬಣಗಳ ನಡುವೆ ಭಾನುವಾರ ರಾತ್ರಿ ನಡೆದ ಸಭೆಯು ಮುರಿದು ಬಿದ್ದಿದೆ. ಉಪ ಮುಖ್ಯಮಂತ್ರಿಯನ್ನಾಗಿ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲು ಬಿ. ಎಸ್. ಯಡಿಯೂರಪ್ಪ ಬಣ ಒಪ್ಪದ ಹಿನ್ನಲೆಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.
ಯಾವುದೇ ಹಂತದಲ್ಲಿಯೂ ಡಿಸಿಎಂ ಹುದ್ದೆ ಕೊಡದಿದ್ದರೆ ಸಂಪುಟದಿಂದಲೇ ದೂರ ಉಳಿಯುತ್ತೇವೆ ಎಂದು ಪಟ್ಟು ಹಿಡಿಯುವ ಮೂಲಕ ಅನಂತ್-ಶೆಟ್ಟರ್ ಬಣ ಒತ್ತಡದ ತಂತ್ರಕ್ಕೆ ಮುಂದಾಗಿದೆ. ಆದರೆ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದು ಸೂಕ್ತವಲ್ಲ. ಬಿಜೆಪಿ ಆಡಳಿತ ಇರುವ ಬೇರೆ ರಾಜ್ಯಗಳಲ್ಲೂ ಉಪಮುಖ್ಯಮಂತ್ರಿ ಸ್ಥಾನ ಇಲ್ಲ. ಹೀಗಾಗಿ ಡಿಸಿಎಂ ಹುದ್ದೆ ಸೃಷ್ಟಿಗೆ ಯಡಿಯೂರಪ್ಪ ಬಣ ಒಪ್ಪುತ್ತಿಲ್ಲ.
ಇದೀಗ ಭಾನುವಾರದ ಮಹತ್ವದ ಸಭೆ ಮುರಿದು ಬಿದ್ದ ಹಿನ್ನಲೆಯಲ್ಲಿ ಇಂದು (ಸೋಮವಾರ) ಮತ್ತೊಂದು ಸುತ್ತಿನ ಮಾತುಕತೆಯನ್ನು ಕರೆಯಲಾಗಿದೆ. ಆದರೆ ಉಭಯ ಬಣಗಳ ಮುಖಂಡರ ನಡುವೆ ಒಮ್ಮತ ಮೂಡಿಬರುವ ಯಾವುದೇ ಲಕ್ಷ್ಮಣಗಳು ಕಾಣಿಸುತ್ತಿಲ್ಲ.
ವರಿಷ್ಠರ ಸೂಚನೆಯಂತೆ ಉಭಯ ಬಣಗಳ ನಡುವೆ ಸಂಧಾನ ನಡೆಸಿ ಸಂಪುಟ ರಚನೆ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ದರ್ಮೇಂದ್ರ ಪ್ರಧಾನ್ ನಗರಕ್ಕೆ ಆಗಮಿಸಿದ್ದರು. ಕಾಲಾಂತರದಿಂದಾಗಿ ಧರ್ಮೆಂದ್ರ ಪ್ರಧಾನ್ ಆಗಮನ ವಿಳಂಬವಾಗಿದ್ದರಿಂದ ಸಿಎಂ ಸದಾನಂದ ಗೌಡ ಅವರ ಅನುಗ್ರಹ ನಿವಾಸದಲ್ಲೇ ಭಾನುವಾರ ರಾತ್ರಿ ಸಭೆ ಕರೆಯಲಾಗಿತ್ತು. ಸಭೆ ಆರಂಭವಾದ ತಕ್ಷಣ ಜಗದೀಶ್ ಶೆಟ್ಟರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಪ್ರಸ್ತಾಪಿಸುತ್ತಿದ್ದಂತೆಯೇ ಯಡಿಯೂರಪ್ಪ ಬಣದಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಇದರಿಂದ ಕೆರಳಿದ್ದ ಈಶ್ವರಪ್ಪ ಸಭೆಯಿಂದ ಹೊರ ಬಂದು ಖಾಸಗಿ ಹೋಟೆಲ್‌ನತ್ತ ತೆರಳಿದರು. ಇದರಿಂದಾಗಿ ಸಭೆ ಅರ್ಧದಲ್ಲಿಯೇ ಮೊಟಕುಗೊಳ್ಳುವಂತಾಗಿತ್ತು. ಡಿಸಿಎಂ ಹುದ್ದೆ ಸೇರಿದಂತೆ ಹಣಕಾಸು ಇಲ್ಲವೇ ಗೃಹ ಖಾತೆ ನೀಡಬೇಕೆಂಬುದು ಶೆಟ್ಟರ್ ಬಣದ ಬೇಡಿಕೆಯಾಗಿದೆ. ಆದರೆ ಇದಕ್ಕೆ ಯಡಿಯೂರಪ್ಪ ಬಣ ಆಸ್ಪದ ನೀಡುತ್ತಿಲ್ಲ. ಇದರಿಂದಾಗಿ ಮಾತುಕತೆ ಮುರಿದು ಬೀಳುವಂತಾಗಿದೆ.
ಒಟ್ಟಿನಲ್ಲಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬೆನ್ನಲ್ಲೇ ಸದಾನಂದ ಗೌಡ ಅವರಿಗೆ ವಿರೋಧ ಪಕ್ಷಕ್ಕಿಂತಲೂ ಪಕ್ಷದ ಆಂತರಿಕ ಸಮಸ್ಯೆಯೇ ಭಾರಿ ಕಗ್ಗಂಟಾಗಿ ಪರಿಣಮಿಸಿದೆ.