ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂಹಗರಣ: ಬಿಎಸ್‌ವೈ, ಎಚ್‌ಡಿಕೆಗೆ ಲೋಕಾಯುಕ್ತ ಸಮನ್ಸ್ (Kumaraswamy | yeddyurappa | Anitha kumaraswamy | Lokayukta court | Land Scam)
ಭೂಹಗರಣ: ಬಿಎಸ್‌ವೈ, ಎಚ್‌ಡಿಕೆಗೆ ಲೋಕಾಯುಕ್ತ ಸಮನ್ಸ್
ಬೆಂಗಳೂರು, ಸೋಮವಾರ, 8 ಆಗಸ್ಟ್ 2011( 13:52 IST )
PR
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದ್ದರೆ, ಮತ್ತೊಂದೆಡೆ ಭೂ ಹಗರಣ ಕುರಿತಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಗೂ ಜಂತಕಲ್ ಮೈನಿಂಗ್ ಕಂಪನಿ ಗುತ್ತಿಗೆ ನೀಡಿದ ಆರೋಪ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲೋಕಾಯುಕ್ತ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಭೂ ಹಗರಣದ ಕುರಿತಂತೆ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ ಎರಡನೇ ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ಕೋರ್ಟ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲಾ 15 ಮಂದಿಯೂ ಆಗಸ್ಟ್ 27ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಅಲ್ಲದೇ ಜಂತಕಲ್ ಕಂಪನಿಗೆ ಅದಿರು ಸಾಗಣೆ ಅನುಮತಿ ಹಾಗೂ ವಿಶ್ವ ಭಾರತಿ ಹೌಸಿಂಗ್ ಸೊಸೈಟಿಗೆ ನೆರವು ಆರೋಪದ ಹಿನ್ನೆಲೆಯಲ್ಲಿ ವಕೀಲ ವಿನೋದ್ ಸಲ್ಲಿಸಿದ್ದ ಅರ್ಜಿಯನ್ವಯ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ನ್ಯಾಯಾಧೀಶ ಹಿಪ್ಪರಗಿ ಸಮನ್ಸ್ ಜಾರಿ ಮಾಡಿದ್ದಾರೆ.
ಜಂತಕಲ್ ಮೈನಿಂಗ್ ಗುತ್ತಿಗೆ ನೀಡುವಲ್ಲಿ ಅಧಿಕಾರ ದುರುಪಯೋಗ ಹಾಗೂ ವಿಶ್ವಭಾರತಿ ಹೌಸಿಂಗ್ ಸೊಸೈಟಿಗೆ ನೆರವು ಆರೋಪದ ವಿಚಾರಣೆ ಸಂದರ್ಭದಲ್ಲಿ ಇಬ್ಬರು ಖುದ್ದು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಕೋರ್ಟ್ ಆದೇಶ ನೀಡಿದೆ.
ವಕೀಲ ಸಿರಾಜಿನ್ ಬಾಷಾ ಹಾಗೂ ಕೆ.ಎನ್.ಬಾಲರಾಜ್ ಅವರು ಬೆಂಗಳೂರಿನ ಲೋಕಾಯುಕ್ತರ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 19(1) ಹಾಗೂ ಅಪರಾಧ ದಂಡ ಸಂಹಿತೆ 1973ರ ಸೆಕ್ಷನ್ 197ರ ಪ್ರಕಾರ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು. ಅಲ್ಲದೇ ಭೂ ಹಗರಣದಲ್ಲಿ ಕುಮಾರಸ್ವಾಮಿ ಕುಟುಂಬ ಭಾಗಿ ಆಗಿರುವ ಬಗ್ಗೆ ವಿಚಾರಣೆ ನಡೆದಿದೆ.